ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣವು ಐತಿಹಾಸಿಕ ಸ್ಥಳಗಳುಳ್ಳ ಊರಾಗಿದ್ದು ಅರೆಮಲೆನಾಡು ಎಂದೇ ಖ್ಯಾತಿ ಪಡೆದಿದೆ. ಮೂಲತಃ ಇದೊಂದು ಜೈನರ ಸ್ಥಳವಾಗಿತ್ತು. ೧೦ ನೇ ಶತಮಾನದಿಂದಲೂ ಹೊಳಲ್ಕೆರೆ ಇರುವ ಬಗ್ಗೆ ಐತಿಹ್ಯವಿದೆ. ಅದರಲ್ಲೂ ದಿಗಂಬರ ಜೈನ ಪಂಥದವರು ಇಲ್ಲಿ ನೆಲೆಸಿದ್ದರು. ಇವರೇ ನಿರ್ಮಿಸಿದ ಪ್ರಾಚೀನ ಕಾಲದ ಶ್ರೀ ಶಾಂತಿನಾಥ ಬಸದಿ ಅತ್ಯಂತ ಪ್ರಾಚೀನ, ಪವಿತ್ರ ಕ್ಷೇತ್ರವಾಗಿದೆ. ೧೦ ನೇ ಶತಮಾನದಲ್ಲಿ ಈ ಬಸದಿ ನಿರ್ಮಾಣ ಮಾಡಲಾಗಿದ್ದರೂ ಇಂದಿಗೂ ಇದರ ಹೊಳಪು ಮಾಸದಿರುವುದು ಅಚ್ಚರಿ ತರುವಂತಿದೆ. ಇಡೀ ಚಿತ್ರದುರ್ಗ ಜಿಲ್ಲೆಯ ಮೊದಲ ಜಿನ ಮಂದಿರವೆಂದು ಖ್ಯಾತವಾಗಿದೆ.ಸಂಪೂರ್ಣ ಕಲ್ಲಿನಿಂದ ನಿರ್ಮಾಣ ಮಾಡಲಾದ ಈ ಬಸದಿ ಯು ಸ್ವಲ್ಪವೂ ಮುಕ್ಕಾಗದೆ, ಸೋರದೆ, ಶಿಥಿಲವಾಗದೆ, ಹಾಳಾಗದೆ ಇರುವುದು ಈ ಬಸದಿಯ ನಿರ್ಮಾಣದ ಕೌಶಲ್ಯ ಎಂಥವರನ್ನು ಬೆರಗುಗೊಳಿಸುತ್ತದೆ.

ಚಿತ್ರದುರ್ಗ ಜಿಲ್ಲೆಯ ಪ್ರಸಿದ್ಧ ಜಿನಕ್ಷೇತ್ರವಾದ ಈ ಬಸದಿ ಇಂದಿಗೂ ಸಾವಿರಾರು ಭಕ್ತರನ್ನು ಹೊಂದಿದೆ. ಇಲ್ಲಿನ ಮೂಲ ಸ್ವಾಮಿಯಾದ ಶ್ರೀ ಶಾಂತಿನಾಥ ತೀರ್ಥಕರರ ಜಿನ ಬಿಂಬವು ಬಹು ಸುಂದರವು, ಮನೋಜ್ಞವೂ, ಆಕರ್ಷಣೀಯ, ರಮಣೀಯವೂ ಕಲಾಪ್ರಪೂರ್ಣವೂ ಆಗಿದೆ. ದೊರೆತ ಶಾಂತಿನಾಥ ಮೂರ್ತಿಗಳಲ್ಲಿ ಈ ಮೂರ್ತಿಯೇ ಹೆಚ್ಚು ಸುಂದರವಾಗಿದೆ ಎಂದು ಹೇಳಲಾಗಿದೆ. ಇಲ್ಲಿರುವ ಕ್ಷೇತ್ರ ರಕ್ಷಕ ಗುಂಡು ಬ್ರಹ್ಮ ದೇವರು ಹಾಗೂ ಮಹಾಮಾತೆ ಪದ್ಮಾವತಿ ಯಕ್ಷಿ ಬಿಂಬಗಳು ಪುರಾತನವೂ ಮಹಾಮಾತಿಕಯಗಳಿಂದ ಕೂಡಿದವು ಆಗಿದೆ.

ಇಲ್ಲಿಗೆ ಮೊದಲಿನಿಂದಲೂ ಜೈನರು ಜೈನೇತರರು (ಇತರ ಧರ್ಮೀಯರು) ಅಪಾರ ಸಂಖ್ಯೆಯಲ್ಲಿ ಬಂದು ಶ್ರದ್ಧಾಭಕ್ತಿಂದ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ ಜಿನಮಂದಿರದ ಮೇಲುಛಾವಣಿ, ನೆಲ ಸಂಪೂರ್ಣ ಕಲ್ಲು, ಚಪ್ಪಡಿಗಳಿಂದ ಕೂಡಿದ್ದು ಬಾಗಿಲಿನಿಂದ ಗರ್ಭಗುಡಿ ತನಕ ಹೊರಗಿನ ಶಬ್ದ ಅಲ್ಪ ಸ್ವಲ್ಪ ಕೇಳಿದರೆ ಗರ್ಭಗುಡಿ ಶಾಂತಿನಾಥ ಮೂರ್ತಿ ಇರುವ ಗೃಹದ ಎದುರಿಗೆ ನಿಂತಾಗ ಸಂಪೂರ್ಣ ಹೊರಗಿನ ಬೆಳಕು ಶಬ್ದಗಳು ಕಂಡುಬರದೇ ಇತ್ಯಾತ್ಮಕ ಕಿರಣ ತರಂಗಗಳು ಎಂಥವರಿಗೂ ಅನುಭವಕ್ಕೆ ಗಮನಕ್ಕೆ ಬೀರುತ್ತದೆ. ನಿರ್ದಿಷ್ಟ ವಾಸ್ತು ರಚನೆ ತತ್ವಗಳ ಆಧಾರದ ಮೇಲೆ ಈ ಬಸದಿ ನಿರ್ಮಾಣ ಮಾಡಲಾಗಿದೆ. ಗರ್ಭಗುಡಿಯ ದ್ವಾರದ ಎದುರಿಗೆ ನಿಂತು ಪಿಸುಮಾತು ನುಡಿದರೂ ಸ್ವಷ್ಟವಾಗಿ ಕೇಳುತ್ತದೆ. ಅದೇ ಈ ಬಸದಿಯ ವೈಶಿಷ್ಟ್ಯ .ಈ ಬಸದಿಯ ರಚನೆಯ ಬಗ್ಗೆ ಸ್ವಷ್ಟ ದಾಖಲೆಗಲಿಲ್ಲದಿದ್ದರೂ ೧೧೫೪ ಕ್ರಿ.ಶ. ವರ್ಷ (೧೦೭೬) ಶಕೆ ವರ್ಷ ದ ತಾಮ್ರ ಶಾಸನ ಇಂದಿಗೂ ಕಾಣಬಹುದು. ಈ ತಾಮ್ರ ಶಾಸನದಲ್ಲಿ ಹಳೆಗನ್ನಡ ಬರೆದ ಬರಹವಿದ್ದು ಹೊಯ್ಸಳ ದೊರೆ ವೀರಬಲ್ಲಾಳನ ಸಾಮಂತರಾದ ಬೆಮ್ಮತ್ತೋರಿನ ಸೋಮದಂಡ ನಾಯಕನು ದಾನ-ದತ್ತಿ ನೀಡಿದ ಉಲ್ಲೇಖವಿದೆ. ಇನ್ನೂ ಅನೇಕ ರಾಜ ಮಹಾರಾಜರು, ದಂಡ ನಾಯಕರು, ಮುನಿಗಳು ಈ ಬಸದಿಗೆ ತಮ್ಮ ಭಕ್ತಿ ಭಾವಗಳನ್ನು ತೋರಿಸಿದ್ದಾರೆ.

ಹೊಳಲ್ಕೆರೆಯು ಮೂಲತಃ ಧಾರ್ಮಿಕ ನೆಲೆ ಬೀಡಾಗಿತ್ತು, ಅದಕ್ಕೆ ಈ ಜಿನ ಮಂದಿರವೇ ಪ್ರಮುಖ ಸಾಕ್ಷಿ. ಹಿಂದಿನಿಂದಲೂ ಮುನಿಗಳ ತಂಗುದಾಣವಾಗಿತ್ತು. ಉತ್ತರದಿಂದ ಬರುತ್ತಿದ್ದ ಜೈನಮುನಿಗಳು ಶ್ರವಣಬೆಳಗೊಳಕ್ಕೆ ತೆರಳುತ್ತಿದ್ದಾಗ ಇಲ್ಲಿ ತಂಗಿ ಮುಂದುವರೆಯುತ್ತಿದ್ದರು. ಇಲ್ಲಿನ ಶಾಂತಿನಾಥ ತೀರ್ಥಂಕರರ ಮಹಿಮೆ ಅಪಾರವಾಗಿದ್ದು ಜಿನಸಮಯ ಪ್ರಭಾವಕರಾದ ಸಂಯೋಮಿತ್ರೇಷ್ಟರ ಕ್ಷೇತ್ರವೂ ಆಗಿದೆ.

ಶ್ರೀ ಶಾಂತಿನಾಥ ತೀರ್ಥಂಕರರ ಜಿನಮಂದಿರವು ತುಂಬ ಪ್ರಾಚೀನವಾಗಿರುವುದಷ್ಟೇ ಅಲ್ಲಿನ ಹೊರ ಭಾಗದಲ್ಲಿರುವ ಶ್ರೀ ಗುಂಡು ಬ್ರಹ್ಮದೇವರು ಮತ್ತು ಶ್ರೀ ಪದ್ಮಾವತಿ ದೇವಿಯ ಮೂರ್ತಿಗಳು ಪ್ರಸಿದ್ಧಿಯಾಗಿದೆ. ಇದು ಹೊಸನಗರ ತಾಲೂಕು ಹೊಂಬುಜ ಪದ್ಮಾವತಿಯ ಅಪರಾವತಾರ ಎಂದೇ ನಂಬಲಾಗಿದೆ. ಹೊಳಲ್ಕೆರೆಯಲ್ಲಿನ ಏಕೈಕ ಲೊಕ್ಕಿ (ಲಕ್ಕಿ) ಮರವಿದ್ದು ಈ ಮರವಿದ್ದ ಕಡೆ ಸುಖ ಶಾಂತಿ ನೆಮ್ಮದಿ ಸಮೃದ್ಧಿ ಇರುತ್ತದೆಯೆಂಬ ನಂಬಿಕೆಯಿದೆ.

ಈ ಜಿನ ಮಂದಿರವು ಇಲ್ಲಿನ ಶಾಸನದ ಪ್ರಕಾರ ೮೦೦ ವರ್ಷಗಳ ಹಿಂದೆ ಶ್ರೀ ಮೂಲ ಸಂಘದ ಶ್ರೀ ಪಾರ್ಶ್ವಭಟ್ಟಾರಕ ಮಹಾಸ್ವಾಮಿಗಳಿಂದ ಜೀರ್ಣೋದ್ಧಾರ ಮಾಡಿದರೆಂದು ತಿಳಿದು ಬರುತ್ತದೆ. ಹಿರೇಕೆರೆಯ ಹಿಂದಿನ ತೋಟ, ಹೊಲವನ್ನು ಜಿನಮಂದಿರಕ್ಕೆ ಕೊಟ್ಟು ಅದರಲ್ಲಿ ಬರುವ ಉತ್ಪತ್ತಿಂದ ನಿತ್ಯದ ಪೂಜೆ, ಮುನಿಗಳಿಗೆ ಆಹಾರ, ಮಂದಿರದ ಅಭಿವೃದ್ಧಿಗೆ ಬಳಸುವಂತೆ ತಿಳಿಸಲಾಗಿದೆ.

ಹಿಂದೆ ಸರ್ವಾರ್ಥಸಿದ್ಧಿ ಗ್ರಂಥವನ್ನು ರಚಿಸಿ ಪ್ರಸಿದ್ಧರಾದ ಶ್ರೀ ಪೂಜ್ಯಪಾದಾಚಾರ್ಯೆರು ವಿದೇಹ ಕ್ಷೇತ್ರದಲ್ಲಿ ಶ್ರೀ ಸೀಮಾಂಧರಸ್ವಾಮಿಗಳ ದರ್ಶನ ಪಡೆದು ಬಂಕಾಪುರಕ್ಕೆ ಆಗಮಿಸಿ ಅಲ್ಲಿ ಶಾಂತಿನಾಥ ತೀರ್ಥಂಕರನ್ನು ದರ್ಶನ ಪಡೆಯುವ ಸಮಯಕ್ಕೆ ಬಿಸಿಲಿನ ಝಳಕ್ಕೆ ಅವರ ಕಣ್ಣುಗಳು ಕಾಣದಂತಾದವು. ಶಾಂತ್ಯಷ್ಟಕ್ಕೆ ರಚಿಸಿ ಪರಭಕ್ತಿಯಿಂದ ಇದೇ ಸ್ವಾಮಿಯನ್ನು ಸ್ಮರಿಸಿದಾಗ ಪುನಃ ಕಣ್ಣು ಕಾಣಿಸುವಂತಾತು. ಇಡೀ ಪ್ರದೇಶಕ್ಕೆ ಇದೇ ಮೂಲಸ್ವಾಮಿಯಾಗಿದೆ. ಹೊಳಲ್ಕೆರೆಯ ಬಳಿರುವ ಕರಿಕಲ್ಲು ದಿಬ್ಬದ ಜೈನ ಸ್ಮಶಾನದ ಬಳಿ ದೊರೆತ ಶಾಸನದಲ್ಲಿ ೧೦೮ ನೇ ಪಾರ್ಶ್ವ ಮುನಿಗಳು ತಪಸ್ಸನ್ನು ಆಚರಿಸಿ ಸಲ್ಲೇಖನಾ ವ್ರತ (ಆಹಾರ ಬಿಟ್ಟು ಪ್ರಾಣ ಬಿಡುವುದು) ಮಾಡಿ ಮರಣ ಹೊಂದಿದ ನಿಷಧಿ ಕಲ್ಲುಗಳಿವೆ.

ಈ ಜಿನ ಮಂದಿರದಲ್ಲಿ ಪ್ರತಿ ವರ್ಷ ಹತ್ತಾರು ಉತ್ಸವ ಆಚರಣೆಗಳು ನಡೆಯುತ್ತವೆ ಅವುಗಳಲ್ಲಿ ಪ್ರಮುಖವಾದುದು..

ಅಷ್ಟಾಕ ಪರ್ವ, ಶ್ರಾವಣ ಪೌರ್ಣಿಮಾ (ಜನಿವಾರದ ಹಬ್ಬ)

ಭಾದ್ರಪದ ಮಾಸದಲ್ಲಿ ಅನಂತನೋಂಪಿ, ಕಳಶ ಪ್ರಭಾವನೆ, ಆರಾಧನೆ

ಕಾರ್ತಿಕ ಮಾಸದಲ್ಲಿ ಕೃತ್ತಿಕೋತ್ಸವ

ಮಾಘ ಬಹುಳ ಚತುರ್ದಶಿಯಲ್ಲಿ ಜಿನರಾತ್ರಿ ಮಹೋತ್ಸವ.

ಹೊಳಲ್ಕೆರೆಯ ಯಾವುದೇ ಇತಿಹಾಸ ಪ್ರಾರಂಭವಾಗುವುದೇ ಈ ಜಿನ ಮಂದಿರದಿಂದ. ಜೈನ ಮಂದಿರದ ಬಳಿಯಲ್ಲಿರುವ ಶಾಸನದಲ್ಲಿರುವ ಕೆಲವು ವಿವರಗಳು :

ಈ ದೇವಸ್ಥಾನದ ಮಹಿಮೆಯನ್ನು ಅರಿತು ಅಂದಿನ ನೋದಣ್ಣಗೌಡ ಮೊದಲಾದವರು ನೀಡಿದ ದಾನದತ್ತಿಗಳು ನಿಂತು ಹೋಗಿದ್ದವು .ಪುನಃ ಅವರ ಸತ್ಪುತ್ರರಾದ ಸೋಮಣ್ಣಗೌಡ, ಶಾಂತಣ್ಣಗೌಡ, ಮತ್ತು ಆದಣ್ಣಗೌಡ ಎಂಬುವರು ನೂರು ಗದ್ಯಾಣವನ್ನು ಪ್ರತಾಪನಾಯಕರಿಗೆ ನೀಡಿ, ಇಲ್ಲಿಯ ಹಿರೆಕೆರೆಯ ಹಿಂದಣ ತೋಟ, ಗದ್ದೆ, ಹೊಲವನ್ನು ಜಿನಮಂದಿರಕ್ಕೆ ಕೊಟ್ಟು ಅದರಿಂದ ಬರುವ ಉತ್ಪತ್ತಿಯಲ್ಲಿ ಪ್ರತಿನಿತ್ಯದ ಪೂಜೆ, ಮುನಿಗಳಿಗೆ ಆಹಾರ ದಾನ ಮೊದಲಾದ ಕಾರ್ಯಗಳಿಗೆ ವಿನಿಯೋಗ ಮಾಡಲು ತಿಳಿಸಲಾಗಿದೆ. ಈ ದತ್ತಿಯನ್ನು ವಿಕ್ರಮ ಶಕ ೧೦೭೬ ನೇ ವರ್ಷದ (ಕ್ರಿಸ್ತಶಕ ೧೧೫೪ರಲ್ಲಿ) ಶ್ರೀಮುಖ ಸಂವತ್ಸರದ ಮಾಘಶುದ್ಧ ೧೦ನೇ ತಾರೀಖಿನ ಶುಕ್ರವಾರ ನೀಡಲಾಗಿತ್ತು.

ಹಾಗಾಗಿ ಇದೊಂದು ಐತಿಹಾಸಿಕ ಜೈನ ಬಸದಿ ಯಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಇಂದಿಗೂ ಮಹತ್ವ ಪಡೆದುಕೊಂಡಿರುವ ದೆಗುಲವಾಗಿದೆ ಎಂದು ಹೇಳಬಹುದು

(ಈ ಎಲ್ಲಾ ಮಾಹಿತಿ ಸ್ವಂತದ್ದು)

.    .    .

Discus