ದಲಿತ, ಅದರಲ್ಲಿಯೂ ಛಲವಾದಿ ಸಮುದಾಯದ ಅಸ್ಮಿತೆ - ಚಿತ್ರದುರ್ಗದ ಪಾಳ್ಳೇಗಾರರ ಚರಿತ್ರೆಯಲ್ಲಿ ಚಿತ್ರದುರ್ಗದ ಕೋಟೆ - ಮದಕರಿ ನಾಯಕ ಹಾಗೂ ಐತಿಹಾಸಿಕ ಮುರುಗ ಶರಣರು ಸ್ಥಾಪಿಸಿದ ಮಠವನ್ನು ಮೀರಿಸುವಷ್ಟು ಅಜರಾಮರವಾಗಿ ಮಹೋನ್ನತ ಸ್ಥಾನವನ್ನು ಪಡೆದಿರುವುದು ವೀರ ವನಿತೆ ಒನಕೆ ಓಬವ್ವಳ ಕಥನ ಚರಿತ್ರೆ. 80ರ ದಶಕದ ಆರಂಭದಲ್ಲಿ ಹೊರಬಂದ ನಾಗರಹಾವು ಸಿನಿಮಾದಲ್ಲಿ ಚಿತ್ರದುರ್ಗದ ಐತಿಹಾಸಿಕ ಪರಂಪರೆ ಹಾಗೂ ಕೋಟೆಯ ಮಹತ್ವವನ್ನು ವರ್ಣಿಸುವ ಸಂದರ್ಭದಲ್ಲಿ ಕೋಟಿಗೆ ದಾಳಿ ಮಾಡಿದ ಮುಸ್ಲಿಂ ಸುಲ್ತಾನನ ಚಿತ್ರದುರ್ಗದ ಪಾಳ್ಳೇಗಾರರ ವೈರಿ ಸೈನ್ಯವನ್ನು, ಕಾವಲುಗಾರನ ಹೆಂಡತಿಯಾಗಿ ಯಾವುದೇ ಕತ್ತಿ ಗುರಾಣಿ ಶಶಸ್ತ್ರಗಳನ್ನು ಬಳಸದೆ ಕೈಗೆ ಸಿಕ್ಕಿದ ಒನಕೆಯಿಂದಲೇ ಸೆದೆ ಬಡಿಯುವ ಓಬವ್ವೆಳ ಸಾಹಸ - ಹಾಗೂ ಯುದ್ಧ ರಂಗದಲ್ಲಿ ಶತ್ರು ಸೈನಿಕ ಸಾಯಿಸುವ ಪರಿ ನೋಡುಗರನ್ನು ಪರಾಕ್ರಮಿಗಳನ್ನಾಗಿ ಮಾಡುತ್ತದೆ. ಈ ವರ್ಣ ರಂಜಿತ ಸನ್ನಿವೇಶವನ್ನು ನೋಡಿಯೇ ಒನಕೆ ಓಬವ್ವಗಳ ಚರಿತ್ರೆಯನ್ನು ದಾಖಲಿಸಲು ಸಾಧ್ಯವಿಲ್ಲ ಎಂಬುವುದನ್ನು ಮೊದಲು ಮನಗಾಣ ಬೇಕಾಗಿದೆ. ಅದು ಕಾಲ್ಪನಿಕ ಚರಿತ್ರೆ - ವಾಸ್ತವದ ಚಿರಿತ್ರಿಯ ಗ್ರಹಿಕೆ ಹಾಗೂ ಬರವಣಿಗೆಯೇ ಬೇರೆ ಇದೆ.

ಇಂತಹ ಸಾಹಸಿ, ವೀರ ವನಿತೆ ಒನಕೆ ಓಬವ್ವ ಅವರ ಸಾಹಸ ಗಾಥೇಯ ಚರಿತ್ರೆಯನ್ನು ಕೇವಲ ಸಿನಿಮಾ ನೋಡಿಯೇ ಬರೆಯಬೇಕೇ....? ಅಥವಾ ಪ್ರಭುತ್ವ ಕೇಂದ್ರಿತ ಹಿನ್ನೆಲೆಯ ಅಂದಿನ ದಲಿತ ಸಂವೇದನೆ ಹಾಗೂ ಇಂದಿನ ಪ್ರಜಾಪ್ರಭುತ್ವ ಸಂದರ್ಭದ ದಲಿತ ಸಂವೇದನೆಯ ದೃಷ್ಟಿಯಿಂದ ವಸ್ತುನಿಷ್ಠವಾಗಿ ಬರೆಯಬೇಕೇ ಎಂಬ ಪ್ರಶ್ನೆಗಳು ಪುಂಖಾನು ಪುಂಖವಾಗಿ ಹುಟ್ಟಿಕೊಳ್ಳುತ್ತವೆ. ಹೀಗೆ ಪ್ರಶ್ನೆಗಳು ಹುಟ್ಟಿಕೊಳ್ಳಲು ಭಾರತದ ಎರಡು ಸಾವಿರ ವರ್ಷಗಳ ಸಾಂಪ್ರದಾಯಿಕ ಚರಿತ್ರೆಯಲ್ಲಿ ಒನಕೆ ಓಬವ್ವಳ ಪಾರಂಪರಿಕ ವಂಶಸ್ಥರ ಚರಿತ್ರೆಯೇ ದಾಖಲಾಗದಿರುವುದು ಕಾರಣವಾಗಿದೆ.

ಏಕೆಂದರೆ, ಭಾರತದ ಪ್ರಭುತ್ವ ಹಾಗೂ ಜನಕೇಂದ್ರಿತ ಚರಿತ್ರೆ ರಚನೆಯಲ್ಲಿ ದುಡಿದು ಸಾಮ್ರಾಜ್ಯ - ಸಂಸ್ಥಾನಗಳನ್ನು ದುಡಿದು ಕಟ್ಟಿದವರ ಚರಿತ್ರೆ ಸಂಪೂರ್ಣ ಗೌಡವೆ ಆಗಿದೆ. ಆದರೆ, ದುಡಿಯದೇ ಸಾಮ್ರಾಜ್ಯದಲ್ಲಿ ಹಾಗೂ ಸಂಸ್ಥಾನಗಳಲ್ಲಿ ಮೆರೆದವರ ಚರಿತ್ರೆ ಅಜರಾಮರವಾಗಿದೆ. ಇದಕ್ಕೆ ಕಾರಣವಾದ ಧರ್ಮಪ್ರಭುತ್ವದ ವಾರಸುದರಿಕೆಯಲ್ಲಿ ಮೆರೆದ ಜಾತಿಯ ಪ್ರತಿಷ್ಠೆಯೇ ಹಿನ್ನೆಲೆಯಲ್ಲಿ ಹಾಗೂ ಒನಕೆ ಓಬವ್ವಳ ಚರಿತ್ರೆ ಹೊರಬಂದ ಸಂದರ್ಭವನ್ನು ಅರ್ಥೈಸಿಕೊಂಡು ದಲಿತ ಸಂವೇದನೆಯ ದೃಷ್ಟಿಯಿಂದ ವಸ್ತುನಿಷ್ಠವಾಗಿ ಗ್ರಹಿಸಬೇಕಾಗಿದೆ. ನೇರವಾಗಿ ಹೇಳಬೇಕೆಂದರೆ ಒನಕೆ ಓಬವ್ವೆ ಕುರಿತ ಚರಿತ್ರೆಯನ್ನು *ಕೇಸರಿ* ಇಂಕ್ನಿಂದ ಬರೆಯಬಾರದು, *ನೀಲಿ* ಇಂಕ್ನಿಂದ ಬರೆಯಬೇಕು .

ಆದರೆ, ಇಂದು ನನ್ನ ಒಡಲಾಳದ ಛಲವಾದಿ ಬಂಧುಗಳಿಗೆ ಓಬವ್ವೆ ಕುರಿತ ನೀಲಿ ಇಂಕಿನ ವಾಸ್ತವ ಚರಿತ್ರೆ ಬೇಕಾಗಿಲ್ಲ - ಬದಲಿಗೆ ಕೇಸರಿ ಇಂಕಿನ ಪುರಾಣದ ಹಿನ್ನೆಲೆಯಲ್ಲಿ ವರ್ಣ ರಂಜಿತವಾಗಿ ಬರೆದ ಚರಿತ್ರೆಯಲ್ಲಿ ದಲಿತರನ್ನು ಪುರಾಣಿಕರಣಗೊಳಿಸುತ್ತಿರುವ ಮಾದರಿಯೇ ರಂಜಿಸುತ್ತಿದೆ.

ಪುರಾಣದ ಹಿನ್ನೆಲೆಯಲ್ಲಿ ಓಬವ್ವಳ ದೇವಾಲಯವನ್ನು ಕಟ್ಟ ದಿನನಿತ್ಯ ಪೂಜೆ ಮಾಡಬಹುದು ನಾವು. ಆದರೆ, ಪ್ರಭುತ್ವದ ಕಾಲದಿಂದಲೂ ಅನೇಕ ಹಣ- ಆಸ್ತಿ- ಅಂತಸ್ತು ಗಳೆಲ್ಲವನ್ನೂ ಬಳುವಳಿಯಾಗಿ ಪಡೆದು ಯಾವುದೇ ಬದಲಾವಣೆ ಇಲ್ಲದೆ ಪಾರಂಪರಿಕ ಧರ್ಮರಾಜಕಾರಣದ ಹಿನ್ನೆಲೆಯಲ್ಲಿಯೇ ಇಂದಿನ ಪ್ರಜಾಪ್ರಭುತ್ವ ಭಾರತದಲ್ಲಿಯೂ ಸ್ವಂತದನ್ನಾಗಿ ಮಾಡಿಕೊಂಡು ಅನುಭವಿಸುತ್ತಿರುವವರಿಗೆ ಒನಕೆ ಓಬವ್ವಳ ಕಂಡು ಕೇಳರಿಯದ ಇಂತಹ ಸಾಹಸಮಯ ಸಾಧನೆಗೆ ಕೊಟ್ಟ ಬಳುವಳಿಗಳು ಎಲ್ಲೋದವು - ಏನಾದವು - ಇಂದಿಗೂ ಒನಕೆ ಓಬವ್ವಳ ವಂಶಸ್ಥರ ಸ್ಥಿತಿ- ಗತಿ ಹೇಗಿದೆ , ಏಕೆ ಒನಕೆ ಒಬ್ಬಳ ಚರಿತ್ರೆ ವೀರಗಲ್ಲಿನ ರೂಪದಲ್ಲಾಗಲಿ - ಹಸ್ತಪ್ರತಿಗಳ ರೂಪದಲ್ಲಾಗಲಿ - ಜಾನಪದ ಗೀತೆಗಳ ರೂಪದಲ್ಲಾಗಲಿ ಎಲ್ಲೂ ದಾಖಲಾಗಲಿಲ್ಲ ಎಂಬ ಸೂಕ್ಷ್ಮ ಪ್ರಶ್ನೆಗಳಿಗೆ ಉತ್ತರವನ್ನಾಗಿ ಭಾರತದ ಸಾಮಾಜಿಕ ಸಂರಚನೆಯೇ ಕಾರಣವಾಗಿದೆ ಎಂದು ಹೇಳಬಹುದು .

ಏಕೆಂದರೆ, ನಮ್ಮ ದೇಶ ಹಾಗೂ ನಮ್ಮ ನಾಡಿನ ಚರಿತ್ರೆ ರಚನೆಗೊಂಡಿರುವ ವಾಸ್ತವದ ಹಿನ್ನೆಲೆಯಲ್ಲಿ ಹೇಳುವುದಾದರೆ....

ಕನ್ನಡ ನೆಲದಲ್ಲಿಯೇ ಅಲ್ಲದೆ ಭರತ ಖಂಡದಾದ್ಯಂತ ಅನಾವರಣ ಗೊಳ್ಳದ ಚರಿತ್ರೆ ಎಂದರೆ ದಲಿತ ಸಂವೇದನೆಯ ವಾಸ್ತವ ಚರಿತ್ರೆ. ಧರ್ಮಪ್ರಭುತ್ವದ ಹಿನ್ನೆಲೆಯ ಜಾತಿ ರಾಜಕಾರಣದ ಹಿಡಿತದಲ್ಲಿ ಶಾಶ್ವತವಾಗಿ ಸ್ವ ಪ್ರತಿಷ್ಠೆಯ ಅಜ್ಞಾನಿಗಳು ನೀಡಿದ ಅಸ್ಪೃಶ್ಯರು ಎಂಬ ಅಮಾನವೀಯ ಪದವಿಯೊಂದಿಗೆ ಬಹುದೊಡ್ಡ ಅಂಧಕಾರದಲ್ಲಿ ಸಿಲುಕಿಕೊಂಡಿದ್ದ ದಲಿತರ ಒಡಲಾಳದ ನೋವು ನಲಿವಿನ ಒಡಲಾಳದ ಚರಿತ್ರೆ ಅನಾವರಣಗೊಳ್ಳ ಬೇಕಾಗಿದೆ.

ಆದರೆ ಇಂತಹ ವಾಸ್ತುವದ ಚರಿತ್ರೆ ಕಣ್ಣಿಗೆ ಕಂಡರೂ ಕಾಣದಂತೆ ಇರಿಸಲಾದ - ಭಾರತದ ಕಣಕಣದಲ್ಲಿಯೂ ಉದುಗಿರುವ ದಲಿತರ ಮೈ ಮೇಲಿನ ಗೆರೆಗಳ- ಹಾಗೂ ಈ ಭಾರತದ ಶ್ರಮ ಸಂಸ್ಕೃತಿಯ ಬೇರಿನ ಚರಿತ್ರೆ ಅಕ್ಷರ ಪ್ರಪಂಚಕ್ಕೆ ಬಾರದಿರುವುದಕ್ಕೂ ಭಾರತದ *ಸಾಂಪ್ರದಾಯಕ* ಚರಿತ್ರೆ ಸೃಷ್ಟಿಕರ್ತರ ಬಹುದೊಡ್ಡ ಸ್ವಾರ್ಥಪರ ಹಿನ್ನೆಲೆಯ ಪ್ರಜ್ಞಾಪೂರ್ವಕ ಕೈಚಳಕಕ್ಕೂ ಧರ್ಮ ಹಾಗೂ ಧರ್ಮದ ಹಿನ್ನೆಲೆಯ ಜಾತಿ ಅಪ್ರಜ್ಞಾಪೂರ್ವಕ ಶ್ರೇಷ್ಠತೆಯ ಬಹುದೊಡ್ಡ ಹಿನ್ನೆಲೆ ಇದೆ. ಈ ಹಿನ್ನಲೆಯಿಂದಲೇ ಶತಶತಮಾನಗಳಿಂದಲೂ ಅಕ್ಷರವನ್ನು ತಮ್ಮ ಏಕಸ್ವಾಮ್ಯ ಸ್ವತ್ತಾಗಿಸಿಕೊಂಡಿದ್ದವರು ಹಾಗೂ ದಲಿತರ ಚರಿತ್ರೆಯನ್ನು ಬರೆಯಬೇಕಾದವರ ಜಾತಿಯ ಶ್ರೇಷ್ಠತೆ ದಲಿತರ ಚರಿತ್ರೆಯನ್ನು ನೋಡು ನೋಡುತ್ತಲೇ ನುಂಗಾಕಿತು.

ನಿಮಗೂ ಬಹುದೊಡ್ಡ ಐತಿಹಾಸಿಕ ಶ್ರಮ ಸಂಸ್ಕೃತಿಯ - ಆಸೆಯೇ ದುಃಖಕ್ಕೆ ಕಾರಣ ಎಂದು ಹೇಳಿದ ನಿಮ್ಮ ಬಹುದೊಡ್ಡ ಪಾರಂಪರಿಕ ದುಡಿದು ಪ್ರಭುಗಳಾಗಿ ಬದುಕಿದ ನಿಮ್ಮ ಚರಿತ್ರೆ ಇದೆ, ಅದನ್ನು ಬರೆಯಿರಿ ಎಂದು ಹೇಳಲೇ ಇಲ್ಲ. ಇದಕ್ಕೆ ಕಾರಣ ಹೇಳಬೇಕಾದವರ ಸಾಮಾಜಿಕ ಹಾಗೂ ಧಾರ್ಮಿಕ ಶ್ರೇಷ್ಠತೆಯ ಪಿತ್ರಾಜಿತವಾಗಿ ಬಂದ ಕಲ್ಪನೆ ಬಹು ದೊಡ್ಡದಾಗಿ ಮಾನಸಿಕ ಅಸ್ಪೃಶ್ಯತೆಯ ಹಿನ್ನೆಲೆಯಲ್ಲಿ ಕೆಲಸವನ್ನು ನಿರ್ವಹಿಸಿದೆ. ಭಾರತದ ಬಹುದೊಡ್ಡ ಜನ ಚರಿತ್ರೆರಚನೆ ಇಂದಿಗೂ ಸಹ ಶಾಸನ,ನಾಣ್ಯ,ಸ್ಮಾರಕ, ದೇವಾಲಯಗಳು ಹಾಗೂ ಹಸ್ತಪ್ರತಿಗಳು ಆ ಮೂಲಕ ಬಹುದೊಡ್ಡ ದೊಡ್ಡ ಸಾಹಿತ್ಯವನ್ನು ರಚಿಸಿದವರ ಮಾನಸಿಕ ಅಸ್ಪೃಶ್ಯತೆಯ ಸಂಕೋಲೆಯಲ್ಲಿ ಸಿಲುಕಿ ಶೂನ್ಯವಾಗಿರುವುದಕ್ಕೆ ನಮ್ಮ ಚರಿತ್ರೆಯ ರಚನೆ ಸಾಕ್ಷಿಯಾಗಿದೆ. ಇದು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ಸಹ ನರಳಾಡುತ್ತಿರುವುದಕ್ಕೆ ಜ್ವಲಂತ ನಿದರ್ಶನಗಳಿವೆ. ಈ ಅಜ್ಞಾನದ ನರಳಾಟಕ್ಕೆ ನಮ್ಮ ದೇಶದ ಶಿಕ್ಷಣ ನೀತಿಯು ಕಾರಣವಾಗಿದೆ. ಏಕೆಂದರೆ ನಮ್ಮ ದೇಶದ ಶಿಕ್ಷಣ ನೀತಿಯಲ್ಲಿ ರಾಷ್ಟ್ರ ಇದೆ, ರಾಷ್ಟ್ರೀಯತೆ ಇದೆ, ಆದರೆ ರಾಷ್ಟ್ರದಲ್ಲಿ ವಾಸಿಸುವ - ರಾಷ್ಟ್ರೀಯತೆಯನೇ ಮೈಗೂಡಿಸಿಕೊಂಡಿರುವ ಜನರು ಮಾತ್ರ ಇಲ್ಲ . ಇದು ನಮ್ಮ ಚರಿತ್ರೆ ಬೋಧನೆ ಹಾಗೂ ರಚನೆಯ ಬಹುದೊಡ್ಡ ದುರಂತ.

ಆದರೆ, ಇಷ್ಟೆಲ್ಲಾ ತನ್ನ ಒಡಲಾಳದ ಚರಿತ್ರೆಯನ್ನು ಅನಾವರಣಗೊಳಿಸಿಕೊಳ್ಳಲು ಶತಶತಮಾನಗಳ ನಂತರ ತಮ್ಮ ಎದೆಗೆ ಬಿದ್ದ ಅಕ್ಷರದಿಂದ ಮುಂದಾದರೂ ಸಹ ಈ ಚರಿತ್ರೆ ಮುಖ್ಯ ವಾಹಿನಿಗೆ ಬರಲು ಹೆಣಗಾಡುತ್ತಿದೆ. ಇಷ್ಟೆಲ್ಲ ಹೆಣಗಾಟದ ನಡುವೆಯೂ ಸಹ ದಲಿತ ಚರಿತ್ರೆ ಅನುಕೂಲಕ್ಕೆ ತಕ್ಕ ಹಾಗೆ ನಾನು ಮೇಲೆ ಹೇಳಿದವರ ಮಾನಸಿಕ ಅಸ್ಪೃಶ್ಯತೆ ಹಿನ್ನೆಲೆಯಿಂದಲೇ ಅವರವರ ರಾಷ್ಟ್ರೀಯವಾದಕ್ಕೆ ತಕ್ಕಂತೆ *ಯೂಸ್ ಅಂಡ್ ಥ್ರೋ* ಆಗುವ ಮಾದರಿಯಲ್ಲಿ ಉಜ್ವಲ- ವೈಭವ- ಧೀರ-ವಿರತನದಿಂದ ಅಲ್ಲಲ್ಲಿ ಉದಯಿಸಿಕೊಳ್ಳುತ್ತಿವೆ .

ಈ ರೀತಿಯ ದಲಿತ ಚರಿತ್ರೆಯ ಉದಯಕ್ಕೆ ಯಾವುದೇ ಮುಹೂರ್ತವನ್ನು ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ವೈದಿಕರು ತಮ್ಮ ಶಾಸ್ತ್ರ ಪುರಾಣದ ಮೂಲಕವೇ ಹೇಳಿದಂತೆ ರಾಜ ಯೋಗದಲ್ಲಿ ಜನಿಸಿದ್ದರೂ ಸಹ ಅವನು ಅಸ್ಪೃಶ್ಯ ಎಂಬ ಕಾರಣಕ್ಕಾಗಿ ಬ್ರಾಹ್ಮಣರು ಸೃಷ್ಟಿಸಿದ ಜಾತಕದಲ್ಲಿ ಇವನಿಗೆ ಸ್ಥಾನವೇ ದೊರಕಲಿಲ್ಲ. ವೀರ ಪರಾಕ್ರಮಿಗಳಾಗಿದ್ದರೂ ಸಹ ಯಾವುದೇ ಪ್ರಾಂತ್ಯಗಳ ರಾಜ ಪಾಳ್ಳೇಗಾರನೂ ಆಗದಿರುವುದಕ್ಕೆ ನಮ್ಮ ದೇಶದ ಧರ್ಮಪ್ರಭುತ್ವ ರಾಜಕಾರಣವು ಸಾಕ್ಷಿಯಾಗಿದೆ. ಆದರೆ ಇಂದು ಪ್ರಜಾಪ್ರಭುತ್ವ ಭಾರತದ ಸಂದರ್ಭದಲ್ಲಿ ದಲಿತರ ಅಭಿವೃದ್ಧಿಗೆ ಸಂವಿಧಾನಾತ್ಮಕ ಕಾನೂನುಗಳು ಸಹಕಾರಿ ಆಗಿರುವ ಹಿನ್ನೆಲೆಯಲ್ಲಿ ದಲಿತರನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಲು ಸಮಯಕ್ಕೆ ತಕ್ಕಂತೆ ತಮಗೆ ಬೇಕಾದ ಮಾದರಿಯಲ್ಲಿ ವೈವೋ ಪ್ರೇರಿತವಾಗಿ - ಭಾವನಾತ್ಮಕತೆ ಹಿನ್ನೆಲೆಯಲ್ಲಿ - ಧಾರ್ಮಿಕ ಸಂಕೋಲೆಯಲ್ಲಿ ಸಿಲುಕಿಸಿ ರಚನೆ ಮಾಡಿ ನಾನು ಮೇಲೆ ಹೇಳಿದಂತೆಯೇ ಸಮಯ ಸಂದರ್ಭಕ್ಕೆ ತಕ್ಕಂತೆ ಯೂಸ್ ಮಾಡಿಕೊಂಡು - ತಮಗೆ ಬೇಡವಾದಾಗ ಮತ್ತದೇ ಅಸ್ಪೃಶ್ಯತೆಯ ಸಂಕೋಲೆಯಲ್ಲಿ ಥ್ರೋ ಮಾಡಿ ಬಿಸಾಕುವ ಹಿನ್ನೆಲೆಯ ಪುರಾಣ ಕಲ್ಪಿತ ಚರಿತ್ರೆ ರಚನೆಯಲ್ಲಿ ಒಬ್ಬ ದಲಿತನು ಅಥವಾ ದಲಿತ ಹೆಣ್ಣು ಮಗಳು ಸಹ ಮಹಾನ್ ಪರಾಕ್ರಮಿ - ಸಾಧಕನಾಗಿ ಕಂಗೊಳಿಸುತ್ತಾನೆ/ಳೆ .

ಇದಕ್ಕೆ ಇಂದಿನ ಕೋಮು ಭಾವನೆ ಹಿನ್ನೆಲೆಯಿಂದಲೇ ರಚನೆಗೊಳ್ಳುತ್ತಿರುವ ಸಾಂಪ್ರದಾಯಿಕ ಚರಿತ್ರೆ ರಚನೆಯೇ ಕಾರಣವಾಗಿದೆ. ಇಂತಹ ಚರಿತ್ರೆ ರಚನೆಯಿಂದ ದೇಶಕ್ಕೆ ಆಗುವುದು ಸಾಂಸ್ಕೃತಿಕ ಹಿನ್ನೆಲೆಯ ಕಷ್ಟ ನಷ್ಟವೇ ಹೊರತು ಬೇರೇನೂ ಅಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ *ಇತಿಹಾಸವನ್ನು ಮರೆತವರು- ಇತಿಹಾಸವನ್ನು ಸೃಷ್ಟಿಸಲಾರರು* ಎಂಬ ಚಾರಿತ್ರಿಕ ವಾಣಿಯ ಮಹತ್ವವನ್ನು ಭಾರತದ ಚರಿತ್ರೆ ಕಾರರು ಕಿಂಚಿತ್ತು ಅಳವಡಿಸಿಕೊಳ್ಳದೇ ಕೇವಲ ಸಾಂಪ್ರದಾಯಿಕ ಚರಿತ್ರೆಯನ್ನು ವೈಭವವಾಗಿ ಬರೆದು ಮಾನವರ ಸಹಜೀವನದ ಶ್ರೇಷ್ಠ -ಕನಿಷ್ಠತೆ ಅಥವಾ ಸ್ಪೃಶ್ಯ- ಅಸ್ಪೃಶ್ಯತೆ, ಧರ್ಮ ಹಾಗೂ ಜಾತಿಗಳ ನಡುವಿನ ಅಂಧಕಾರದ ಅಂತರಗಳ ವಸ್ತುನಿಷ್ಠ ಚರಿತ್ರೆಯನ್ನು ಸ್ವಲ್ಪವೂ ದಾಖಲಿಸದೆ ಚಿರಿತ್ರೆ ರಚನೆಯಲ್ಲಿ ಬೇಕಂತಲೇ ಮರೆಮಾಚಿದ್ದು ಭಾರತದ ಹಾಗೂ ಭಾರತೀಯರ ಚರಿತ್ರೆಯನ್ನು ಪ್ರಪಂಚದ ಭೂಪಟದಲ್ಲಿ ಶೂನ್ಯವನ್ನಾಗಿಸಿದೆ. ಹೀಗೆ ಪ್ರಜ್ಞಾಪೂರ್ವಕವಾಗಿಯೇ ಮರೆತವರಿಂದ ಹೇಗೆ ತಾನೇ ಇತಿಹಾಸವನ್ನು ನಿರ್ಮಿಸುವ ಸಾಧ್ಯ. ಈ ದೃಷ್ಟಿಕೋನದ ಚರಿತ್ರೆಕಾರರಿಂದಲೇ ಭಾರತದ ಚರಿತ್ರೆ ಬಡವಾಗಿರುವುದು. ಈ ಸಂದರ್ಭದಲ್ಲಿ ಇಂದು ಸಾಮಾಜಿಕವಾಗಿ ಬಡವಾಗಿರಬಹುದು ಆದರೆ ಚಾರಿತ್ರಿಕವಾಗಿ ಶ್ರೀಮಂತರಾಗಿರುವ ದಲಿತ ಸಮುದಾಯ ತಮ್ಮ ಚರಿತ್ರೆಯನ್ನು ಹೆಚ್ಚು ಹೆಚ್ಚು ವಸ್ತುನಿಷ್ಠವಾಗಿ ಬರೆಯಬೇಕಾಗಿದೆ. ಇಂತಹ ಚರಿತ್ರೆ ರಚನೆಯ ಸಂದರ್ಭದಲ್ಲಿ ಕಾಡುವ ಪ್ರಶ್ನೆಯೇ ಒನಕೆ ಓಬವ್ವಳ ಚರಿತ್ರೆಯ ಮರು ಹುಟ್ಟಿನ ಕಥೆ.

ಈ ಮಾದರಿಯಲ್ಲಿಯೇ ಚರಿತ್ರೆ ರಚನೆಯಲ್ಲಿ ಉಜ್ವಲವಾಗಿ ಉದಯಿಸಿದವಳೇ *ಚಲವಾದಿ ಜನಾಂಗದ ವೀರ ವನಿತೆ ಚಿತ್ರದುರ್ಗದ ಒನಕೆ ಓಬವ್ವೆ* ಎಂದೆ ಹೆಸರುವಾಸಿ ಆಗಿರುವ ದಲಿತ ಜನಾಂಗದ ಚಿತ್ರದುರ್ಗದ ಧೀಮಂತ ಮಹಿಳೆ. ವೀರತನ ಮೆರೆದ ಓಬವ್ವೆ ಯಾವುದೇ ಸಂಸ್ಥಾನದ ಪಾಳ್ಳೇಗಾರನ ರಾಣಿಯೂ ಆಗಿರಲಿಲ್ಲ. ವೈದಿಕರಿಂದ ಕ್ಷತ್ರಿಯ ಎಂಬ ದೀಕ್ಷೆಯನ್ನು ಪಡೆದು ರಾಜ್ಯವನ್ನು ಕಟ್ಟಿ ಆಳ್ವಿಕೆ ಮಾಡಿದ ಕ್ಷತ್ರಿಯ ಕುಲದವಳೂ ಆಗಿರಲಿಲ್ಲ. ಬದಲಿಗೆ ಇವಳು, ತಮ್ಮ ಶ್ರಮದ ಮೂಲಕ ರಾಷ್ಟ್ರವನ್ನು ಭದ್ರವಾಗಿ ದುಡಿದು ಕಟ್ಟಿದ, ತಮ್ಮ ಯುದ್ಧ ಕೌಶಲ್ಯಗಳಿಂದಾಗಿ ಸಾಮ್ರಾಜ್ಯಗಳಲ್ಲಿ ಸೈನಿಕರಾಗಿ ರಾಜನಿಷ್ಠೆಯಿಂದ ದೇಶಕ್ಕಾಗಿ ಸೇವೆ ಸಲ್ಲಿಸಿದ, ಸಾಮ್ರಾಜ್ಯಗಳ ಭದ್ರತೆಗಾಗಿ ಕೋಟೆಯನ್ನು ಭದ್ರ ಬುನಾದಿಯ ಮೂಲಕ ನಿರ್ಮಿಸಿದ, ತಾವು ದೇವಾಲಯದೊಳಗೆ ಪ್ರವೇಶ ಪಡೆಯದಿದ್ದರೂ ಸಹ ದೇವಾಲಯದ ಒಳಗೆ ಪ್ರವೇಶ ಮಾಡುವವರಿಗಾಗಿಯೇ ಬೃಹತ್ ದೇವಾಲಯಗಳನ್ನು ನಿರ್ಮಿಸಿಕೊಟ್ಟ , ತಾವು ಶ್ರಮಪಟ್ಟು ದುಡಿದರೂ ಸಹ ತಮ್ಮ ಆಳ್ವಿಕೆಯ ರಾಜ, ಮಹಾರಾಜ, ಪಾಳ್ಳೇಗಾರ, ಶ್ರೇಣಿಕಿತ ವ್ಯವಸ್ಥೆಯ ಹಿನ್ನೆಲೆಯಲ್ಲಿ ನಾವು ಮೇಲ್ಪಂತಿಯವರು ಎಂದು ಹೇಳಿಕೊಳ್ಳುವವರ ರಿಂದ ಶತ ಶತಮಾನಗಳಿಂದ ಅಸ್ಪೃಶ್ಯತೆ ಎಂಬ ಅಮಾನವೀಯ ಸಂಕೋಲಿಯಲ್ಲಿ ಸಿಲುಕಿ ಬದುಕಿ ಬಾಳಿದ ಕುಲದವಳು. ಮೇಲಿನ ಹಿನ್ನೆಲೆಯಲ್ಲಿ ಒನಕೆ ಓಬವ್ವಳ ವಂಶಸ್ಥರ ಶ್ರಮದ ಚರಿತ್ರೆ ಇದ್ದರೂ ಸಹ ಎಲ್ಲೂ ದಾಖಲಿಸದೆ, ಚಿತ್ರದುರ್ಗವನ್ನು ಆಳ್ವಿಕೆ ಮಾಡುತ್ತಿದ್ದ ಬೇಡ ಸಮುದಾಯದ ಮದಕರಿ ನಾಯಕನ ಬಹುದೊಡ್ಡ ಪಾಳ್ಯ ಪಟ್ಟನ್ನು ಹೊಸಪಡಿಸಿಕೊಳ್ಳಲು ಮುಸ್ಲಿಂ ಸಮುದಾಯದ ಹೈದರಾಲಿಯ ಸೈನ್ಯ ದಾಳಿ ಮಾಡಿದ ಕಾರಣಕ್ಕಾಗಿಯೇ ಕೋಮು ಭಾವನೆಯ ಚರಿತ್ರೆ ರಚನೆಯ ಹಿನ್ನೆಲೆಯಲ್ಲಿ ಒನಕೆ ಓಬವ್ವನನ್ನು ಸಹ ಬಳಸಿಕೊಳ್ಳಲಾಯಿತು. ಕನ್ನಡ ನಾಡಿನಲ್ಲಿ ವಿಜಯನಗರ ಪತನ ನಂತರ ಹಿಂದೂ(ಸನಾತನಿಯ ಧರ್ಮ ರಕ್ಷಣೆ ಹಾಗೂ ಬ್ರಾಹ್ಮಣ ಹಾಗೂ ಬ್ರಾಹ್ಮಣ್ಯದ ರಕ್ಷಣೆ) ಧರ್ಮದ ರಕ್ಷಣೆಗಾಗಿ ಅತ್ಯಂತ ಹೆಚ್ಚು ಶ್ರಮಿಸಿದ ಮೈಸೂರ ಸಂಸ್ಥಾನವನ್ನು - ಮೈಸೂರಿನ ರಾಜಕೀಯ ಚರಿತ್ರೆಯಲ್ಲಿ ಉಂಟಾದ ಸಾಂಸ್ಕೃತಿಕ ಸಿದ್ಧಾಂತದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಹೈದೆರಾಲಿಯು ಆಡಳಿತ ಮುಖ್ಯಸ್ಥನಾಗಿ ನೇಮಕಗೊಂಡು ಇಂದು ಅರಸರನ್ನು ಮೂಲೆಗುಂಪಾಗಿಸಿ ಸರ್ವಾಧಿಕಾರಿಯಾಗಿ ಆಳ್ವಿಕೆ ಮಾಡಿದ್ದನ್ನೇ ಮುಂದಿಟ್ಟುಕೊಂಡು ಉಜ್ವಲ ಕಥೆಯನ್ನು ವರುಣ ರಂಜಿತವಾಗಿಯೇ ಬರೆದದ್ದು ಆಗಿದೆ. ಒನಕೆ ಓಬವ್ವಳ ಸಾಹಸಗಾಥೆಯ ಚರಿತ್ರೆಯನ್ನು ಬರೆದ ಸಂದರ್ಭಕ್ಕೂ ಒನಕೆ ಓಬವ್ವೆ ಸಾಹಸ ಮಾಡಿದ ಸಂದರ್ಭಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಷ್ಟಕ್ಕೂ ನಾನು ಮೇಲೆ ಹೇಳಿದವರು ನಮ್ಮ ಕುಲದ ವೀರ ವನಿತೆ ಒನಕೆ ಓಬವ್ವಗಳ ಚರಿತ್ರೆಯನ್ನು ಅವಳು ಮೈಸೂರು ಸಂಸ್ಥಾನದ ಸರ್ವಾಧಿಕಾರಿ ಸುಲ್ತಾನ ಹೈದರಾಲಿಯ ಸೈನ್ಯದ ವಿರುದ್ಧ ರಣಚಂಡಿ ಅವತಾರವನ್ನು ತಾಳಿ - ವೀರ ಗಚ್ಚೆಯನ್ನು ಹಾಕಿ - ಕೈಯಲ್ಲಿ ಒನಕೆ ಹಿಡಿದು ದುರ್ಗಿಯನ್ನು ಮನದಲ್ಲಿ ನೆನೆದು ಕಲ್ಲಿನ ಕಿಂಡಿಯಿಂದ ಹೊರ ಬಂದ ಸೈನಿಕರನ್ನು ಸದೆಬಡೆದ ಸಂದರ್ಭದಲ್ಲಿಯೇ ಅಕ್ಷರವನ್ನು ತಮ್ಮ ಸ್ವತ್ತಾಗಿಸಿಕೊಂಡಿದ್ದವರು ಬರೆಯಲಿಲ್ಲ?. ಇದು ಅಸ್ಪೃಶ್ಯತೆಯ ಮನೋಭಾವನೆ ಅಲ್ಲದೆ ಮತ್ತೇನು?. ಆದರೆ ಇದೇ ಒನಕೆ ಓಬವ್ವಳ ಚರಿತ್ರೆಯನ್ನು ಸ್ವಾತಂತ್ರ್ಯ ಚಳುವಳಿಯ ಸಂದರ್ಭ ಹಾಗೂ ಕರ್ನಾಟಕ ಏಕೀಕರಣದ ಸಂದರ್ಭದಲ್ಲಿಯೇ ವೈಭವವಾಗಿ ಬರೆದದ್ದು ಯಾಕಾಗಿ?. ಎಂಬ ಪ್ರಶ್ನೆಗಳು ಪ್ರತಿಯೊಬ್ಬ ದಲಿತ ಸಂವೇದನೆಯ ಚರಿತ್ರೆ ಕಾರರಿಗೂ ಮೂಡಬೇಕು. ಇಂತಹ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ದಲಿತರು ಇಂದು ವಸ್ತುವಿಷ್ಟವಾಗಿ ನಮ್ಮ ನಮ್ಮ ಶ್ರಮಕೇಂದ್ರಿತ ಚರಿತ್ರೆಯನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾರತದ ಚರಿತ್ರೆ ರಚನೆಯ ಸಿದ್ಧಾಂತದ ಹಿನ್ನೆಲೆಯ ವಸ್ತುನಿಷ್ಠ ಮಾದರಿಯಲ್ಲಿ ರಚಿಸಬೇಕಾಗಿದೆ. ಇಂತಹ ಹಲವಾರು ಮೂಲಭೂತ ಪ್ರಶ್ನೆಗಳನ್ನು ಮುಂದೆ ಮಾಡಿಕೊಂಡು ನಮ್ಮ ದುಡಿಮೆಯ ಬೆವರನ್ನೇ ನಮ್ಮ ಲೇಖನಿಗೆ ಶಾಯಿಯನ್ನಾಗಿ ಮಾಡಿಕೊಂಡು ಶ್ರದ್ಧೆಯಿಂದ ಬರೆಯಬೇಕಾಗಿದೆ. ತೀರ್ಥವನ್ನೇ ಪೆನ್ನಿಗೆ ಶಾಯಿಯನ್ನಾಗಿಸಿಕೊಂಡು ಬರೆದವರ ಚರಿತ್ರೆಗೆ ಮನಸೋಲದೆ ಈ ನೆಲದ ಮೂಲ ನಿವಾಸಿಗಳ ಬೆವರಿನ ಚರಿತ್ರೆಯನ್ನು ನಿರ್ಮಾಣ ಮಾಡಬೇಕಾಗಿದೆ.

ಹೌದು, ಈ ಬೆವರಿನ ಚರಿತ್ರೆಗೆ ತೀರ್ಥದ ಚರಿತ್ರೆಗೆ ಇರುವ ಹಾಗೆ ವೈಭವ ಇಲ್ಲ . ಅದಕ್ಕಾಗಿ ಇದು ರಂಜಿಸುವುದಿಲ್ಲ. ದಲಿತ ಚರಿತ್ರೆಗೆ ರಂಜನೇ ಇಲ್ಲ. ಅದಕ್ಕೆ ಇರುವುದು ತಾತ್ವಿಕ ಹಿನ್ನೆಲೆಯ ವಸ್ತುನಿಷ್ಠತೆ. ದಲಿತ ಚರಿತ್ರೆ ರಚನೆಗೆ ಯಾರು ವೈರಿ- ಯಾರು ಮಿತ್ರ ಎಂದು ಬಹು ಸೂಕ್ಷ್ಮವಾಗಿ ಗ್ರಹಿಸಿದರೆ ಮಾತ್ರ ದಲಿತರ ಚರಿತ್ರೆಯನ್ನು ಸಾಂಸ್ಕೃತಿಕವಾಗಿ ರಚಿಸಬಹುದು. ಈ ಭಾರತ ಹಾಗೂ ಭಾರತೀಯರ ಶತಶತಮಾನಗಳ ವಾರಸುದಾರರಾಗಿ ಜ್ಞಾನದ ಸಂಕೇತವಾಗಿ ಉದಯಿಸಿದ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರೊಬ್ಬರೇ ಈ ಮಾದರಿಯ ಚರಿತ್ರೆಯನ್ನು ರಚಿಸಿದವರು. ಈ ಹಿನ್ನೆಲೆ ಇಂದಲೇ ಅಂಬೇಡ್ಕರ್ ಅವರು ಭಾರತದ ಪ್ರಪ್ರಥಮ ಸಬರ್ಟ್ರನ್ ಅಥವಾ ಈ ನೆಲದ ಮೂಲ ನಿವಾಸಿಗಳ ಮೂಲ ಚರಿತ್ರೆಯನ್ನು ಅನಾವರಣಗೊಳಿಸಿದ ಪ್ರಮುಖ ಚರಿತ್ರೆ ಕಾರರು ಎಂದೆನಿಸಿಕೊಂಡರು. ಇಂತಹ ಮಹತ್ವದ ಸಾಧನೆ ಮಾಡುವುದು ಅಂಬೇಡ್ಕರ್ ಅವರಿಗೆ ಸುಲಭದ ದಾರಿಯಾಗಿರಲಿಲ್ಲ. ಎರಡು ಅಥವಾ ಮೂರು ಸಾವಿರ ವರ್ಷಗಳಿಂದ ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯನ್ನು ಮೈಗೂಡಿಸಿಕೊಂಡು ಅಜ್ಞಾನದಿಂದ ಸಾಂಪ್ರದಾಯಿಕವಾಗಿ ಹರಿಯುತ್ತಿದ್ದ ನದಿಯ ವಿರುದ್ಧ ಅಂಬೇಡ್ಕರ್ ರವರು ಬೌದ್ಧಿಕವಾಗಿ ಈಜಬೇಕಾಗಿತ್ತು. ಇಂತಹ ಏಕಮುಖವಾದ ನದಿಗೆ ಧುಮುಕಿ ಒಂದಷ್ಟು ಈಜಿ ದವರು ಬುದ್ಧ ಬಸವರು. ಇವರು ಕಾಲದ ಸುಳಿಯಲ್ಲಿ ಸಿಲುಕಿ ತಮ್ಮ ತಮ್ಮ ಈಜಾಟವನ್ನು ಅರ್ಧಕ್ಕೆ ನಿಲ್ಲಿಸಿದರು. ಇಂತಹ ಈಜಾಟವನ್ನು ಯಶಸ್ವಿಯಾಗಿ ಮುನ್ನುಡಿಸಿದವರು ಹಾಗೂ ದಡ ಸೇರಿದವರು ಮಾತ್ರ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಂಬುದನ್ನು ನಾವ್ಯಾರು ಮರೆಯಬಾರದು. *ಅಂಬೇಡ್ಕರ್ ಅವರು ಇಂತಹ ಸಾಂಪ್ರದಾಯಿಕ ನದಿಗೆ ವಿರುದ್ಧವಾಗಿ ಈಜಲು ನದಿಗೆ ಧುಮುಕಿದ್ದಾಗಲಿಂದ - ಅವರು ಯಶಸ್ವಿಯಾಗಿ ದಡ ಸೇರುವವರೆಗಿನ ಪಟ್ಟ ಪರಿಶ್ರಮದ ಚರಿತ್ರೆಯೇ ನಾನು ಮೇಲೆ ಹೇಳಿದಂತೆ ಭಾರತದ ವೈಭವಿ ಕೇಂದ್ರಿತ- ಸುವರ್ಣ ಯುಗಗಳ ಚರಿತ್ರೆಯ ವಿರುದ್ಧದ ಬಹುಜನಕೇಂದ್ರಿತ ಚರಿತ್ರೆಗೆ ಮುನ್ನುಡಿ ಬರೆದಂತೆ ಆಗಿದೆ*. ಈ ಮಾದರಿಯಲ್ಲಿ ಚಿತ್ರದುರ್ಗದ ಒನಕೆ ಓಬಳ ಚರಿತ್ರೆಯನ್ನು ನಾವು ನೀವು ವಸ್ತುನಿಷ್ಠವಾಗಿ ಕಟ್ಟಿ ಕೊಡಬೇಕಾಗಿದೆ. ಈ ಮಾದರಿಯ ಒಂದು ಪ್ರಯತ್ನವೇ ಈ ಕೃತಿಯ ಜೀವಾಳ. ಈ ಪುಟ್ಟ ಕೃತಿ ಅನೇಕ ಪ್ರಶ್ನೆಗಳನ್ನು ನಮ್ಮ ನಿಮ್ಮಲ್ಲಿ ಉಂಟುಮಾಡುತ್ತದೆ. ಈ ಪ್ರಶ್ನೆಗಳಿಗೆ ಯಾರು ಅನ್ಯತಾ ಭಾವಿಸದೆ - ದಲಿತ ಸಂವೇದನೆಯ ಹಿನ್ನೆಲೆಯ ಚರಿತ್ರೆಯನ್ನು ಮನಗಂಡು ಸೂಕ್ತ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ಕೋಪ- ದ್ವೇಷ- ಆಕ್ರೋಶಗಳಿಗೆ ನಮ್ಮ ಸ್ವಾರ್ಥದ ಹಿನ್ನೆಲೆಯಲ್ಲಿ ಚರಿತ್ರೆಯನ್ನು ಬಲಿಮಾಡಿ ಶತಶತಮಾನಗಳಿಂದ ಧರ್ಮ ಪ್ರಭುತ್ವದವರ ಕುತಂತ್ರಕ್ಕೆ ತಲೆಬಾಗಿದಂಗೆ ಪ್ರಜಾಪ್ರಭುತ್ವ ಭಾರತದಲ್ಲಿಯೂ ಸಹ ದೇವರು ಹಾಗೂ ದೇವಾಲಯಗಳ ಹೆಸರಿನಲ್ಲಿ ಉದಯಿಸಿರುವ ಬಣ್ಣ ಬಣ್ಣದ ಬಾವುಟಗಳಿಗೆ ಶರಣಾಗುವುದು ಬೇಡ ಎಂಬುದು ಕಳಕಳಿಯ ಮನವಿ.

.    .    .

Discus