ನನಗೆ ಸಮಕಾಲೀನ ಸಂದರ್ಭದಲ್ಲಿ ಚಿತ್ರದುರ್ಗ ಪಾಳೆಯಗಾರರ ಚರಿತ್ರೆ ಬಹು ಚರ್ಚಿತ ವಿಷಯವಾಗುತ್ತಿರುವುದರ ಹಿಂದೆ ಅದರ ಜೀವಂತಿಕೆಯ ಲಕ್ಷಣ ಅಡಗಿರುವುದು ಕಾಣಿಸುತ್ತಿದೆ. ಏಕೆಂದರೆ, ಚಿತ್ರದುರ್ಗ ಪಾಳೆಯಗಾರರ ಚರಿತ್ರೆಯನ್ನು ವರ್ತಮಾನಕ್ಕೆ ಸಿದ್ಧಗೊಳಿಸುವಲ್ಲಿ ಚರಿತ್ರೆಕಾರನ ಪಾತ್ರ ಹಿರಿದಾಗಿದೆ ಎಂದೇ ನನ್ನ ನಂಬಿಕೆ. ಪಾಳೆಯಗಾರರ ಊಳಿಗಮಾನ್ಯ ವ್ಯವಸ್ಥೆಯ ಸಾಂಸ್ಕೃತಿಕ ಸಂಗತಿಗಳನ್ನು ವರ್ತಮಾನದ ಚಾಳೀಸಿನಿಂದ ನೋಡಿದಾಗ ಅವರ ಆಡಳಿತದ ವೈಖರಿಗಳು ನಮ್ಮ ತಲೆಮಾರಿನವರಿಗೆ ‘ಜನಾಂಗ’ದ ಸಾಧನೆಗಳಾಗಿ ಕಾಣುತ್ತವೆ. ಪಾಳೆಯಗಾರರ ಆಡಳಿತದ ಸಂದರ್ಭದಲ್ಲಿ ಅವರದೇ ಜನಾಂಗದವರು ಅನುಭವಿಸಿದ್ದ ನೋವು, ನಿರ್ಲಕ್ಷ್ಯಗಳು ಮಸುಕಾಗಿ ಕಾಣುತ್ತವೆ. ಇಂದಿನ ನಮ್ಮ ತಲೆಮಾರಿನ ಯುವಕರಿಗೆ ಚಿತ್ರದುರ್ಗದರಸರು ಚರಿತ್ರೆಯ ಪ್ರತೀಕಗಳಾಗಿ, ಜನಾಂಗದ ಅಸ್ಮಿತೆಯ ಸಂಕೇತಗಳಾಗಿದ್ದಾರೆ. ಅಂಥದರಲ್ಲಿ ‘ರಾಜಾವೀರ ಮದಕರಿನಾಯಕ, ‘ಮದಕರಿ’ ಮತ್ತು ‘ಮದಕರಿಖಡ್ಗ’ಕರ್ನಾಟಕದ ನಾಯಕ ಜನಾಂಗಕ್ಕೆ ಮುಂಚೂಣಿಯ ಅಸ್ಮಿತೆಯಾಗಿರುವುದು ವರ್ತಮಾನದ ಜೀವಂತಿಕೆಯ ಲಕ್ಷಣವೇ ಸರಿ. ಒಂದು ಕಾಲಘಟ್ಟದಲ್ಲಿದ್ದ ರಾಜ ವರ್ತಮಾನದ ಜನಾಂಗವೊಂದರ ಸಾಂಸ್ಕೃತಿಕ ಪರಂಪರೆಗೆ ಮುಂದಾಳಾಗುವುದನ್ನು ‘ಅಪಮಾನ’ವೆಂದು ಭಾವಿಸಕೂಡದು ‘ಅಭಿಮಾನ’ವೆಂದೇ ಭಾವಿಸಬೇಕು. ಏಕೆಂದರೆ, ಅದರಲ್ಲಿ ಒಂದು ಜನಾಂಗದ ಸಂಸ್ಕೃತಿ ಜೀವಿಸುತ್ತಿರುತ್ತದೆ. ಅದು ಬಿಟ್ಟು ಹೋಗಿರುವ ಅದೆಷ್ಟೋ ಸಾಂಸ್ಕೃತಿಕ ಕುರುಹುಗಳು ಅಸಂಖ್ಯ ಜನರನ್ನು ತನ್ನತ್ತ ಸೆಳೆಯುತ್ತಲೇ ಅಸಂಖ್ಯ ಜನರ ಬದುಕಿನ ತುತ್ತಿನಚೀಲವನ್ನೂ ತುಂಬಿಸುತ್ತಿವೆ. ಏಕೆಂದರೆ, ಇವರುಗಳು ನಿರ್ಮಿಸಿ ಬಿಟ್ಟೋಗಿರುವ ಸ್ಮಾರಕಗಳು ಇಂದು ದೇಶಕ್ಕೆ ಬಹುದೊಡ್ಡ ಪ್ರವಾಸೋಧ್ಯಮ ಅವಕಾಶವನ್ನು ಸೃಷ್ಠಿಸಿವೆ. ಅಲ್ಲದೆ, ಅವರ ಕಾಲದ ಸಂಸ್ಕೃತಿ, ಜ್ಞಾನ ಕೌಶಲ್ಯಗಳು ಇಂದಿನ ಪೀಳಿಗೆಗೆ ಸಾಂಸ್ಕೃತಿಕವಾಗಿ ಪ್ರಭಾವಿಸುತ್ತಿವೆ. ಇಂಥ ಚರಿತ್ರೆಯನ್ನು ವರ್ತಮಾನದಲ್ಲಿ ಜೀವಿಸುತ್ತಿರುವ ಜನಾಂಗಕ್ಕೆ ಸಿದ್ಧಗೊಳಿಸಿ ಕೊಟ್ಟಿರುವಲ್ಲಿ ಚರಿತ್ರೆಕಾರನ ಪಾತ್ರ ಮುಖ್ಯವೆನಿಸುತ್ತದೆ. ಏಕೆಂದರೆ, ವರ್ತಮಾನದಲ್ಲಿ ಚರಿತ್ರೆಕಾರ ಯಾವಾಗಲೂ ಚರಿತ್ರೆಯೊಂದಿಗೇ ಜೀವಿಸುತ್ತಿರುತ್ತಾನೆ.
ಚಿತ್ರದುರ್ಗ ಪಾಳೆಯಗಾರರು, ಚಿತ್ರದುರ್ಗ ಕೇಂದ್ರವಾಗಿಟ್ಟುಕೊಂಡು ಸಂಸ್ಥಾನ ಸ್ಥಾಪಿಸುವ ಮೊದಲು ಕ್ರಿ.ಶ. 1565 ರಲ್ಲಿ ಹಿರಿಯೂರಿನಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಇದನ್ನು ಹಿರಿಯೂರಿನ ಹಳೆವೂರಿನ ಶಾಸನ ದೃಢಪಡಿಸುತ್ತದೆ. ಹಳೆವೂರಿನಲ್ಲಿ ದೊರೆತಿರುವ ತಿಮ್ಮಣ್ಣನಾಯಕನ ಶಾಸನವನ್ನು ಆಧಾರವಾಗಿಟ್ಟುಕೊಂಡು ಹಿರಿಯೂರು ಈ ವಂಶದವರ ಆಡಳಿತದ ಪ್ರಾಚೀನ ಮಾತೃಭೂಮಿಯಾಗಿತ್ತು ಎಂದು ತಿಳಿದುಬಂದಿದೆ. ಇವರ ಮೂಲ ಪುರುಷ ಚಿತ್ರನಾಯಕನ ಮೂರು ಜನ ಮಕ್ಕಳಾದ ಜಡಿಕಲ್ಲು ನಾಯಕ, ಸಬ್ಬಗಡಿ ಓಬನಾಯಕ ಮತ್ತು ಬುಳ್ಳನಾಯಕರು ಕ್ರಿ.ಶ. 1475 ರಲ್ಲಿ ದೆಹಲಿ ಕಡೆಯಿಂದ ಇಂದಿನ ನೀರ್ಥಡಿ ಗ್ರಾಮಕ್ಕೆ ಬಂದು ಬಿಳಿಚೋಡು ಗ್ರಾಮದಲ್ಲಿ ನೆಲಸಿದ್ದರೆಂಬ ಪ್ರತೀತಿ ಇದೆ. ಇವರು ವಾಲ್ಮೀಕಿ ವಂಶಸ್ಥರೂ, ಕಾಮಗೇತಿ ಕುಲಜರು ಆಗಿದ್ದರು. ಚಿತ್ರದುರ್ಗವನ್ನು ಮತ್ತಿ ಹಾಗೂ ಬಿಳಿಚೋಡು ಸಂತತಿಯವರು ಆಳ್ವಿಕೆ ಮಾಡಿದ್ದಾರೆ. ತಿಮ್ಮಣ್ಣನಾಯಕ ಮತ್ತಿ ಸಂತತಿಯ ಮೂಲಪುರುಷ. ಇಂದಿನ ಸಂತೆಬೆನ್ನೂರು ಸಮೀಪದಲ್ಲಿರುವ ‘ಮತ್ತಿ’ಪ್ರದೇಶದಲ್ಲಿದ್ದ ಕಾರಣಕ್ಕೆ ಇವನನ್ನು ಮತ್ತಿ ತಿಮ್ಮಣ್ಣನಾಯಕ ಎಂದು ಕರೆಯಲಾಗಿದೆ. ವಿಜಯನಗರದ ಕಾಲದಲ್ಲಿ ‘ಮತ್ತಿ’ಪರಿಸರ ‘ಮದಕರಿನಾಡು’ ಎಂದು ಪ್ರಸಿದ್ಧಿಯಾಗಿತ್ತು. ಆದ್ದರಿಂದ, ಈ ವಂಶದವರಿಗೆ ‘ಮದಕರಿ’ ಎಂಬ ಬಿರುದು ಸಾಮಾನ್ಯವಾಗಿದೆ. ಮತ್ತಿ ತಿಮ್ಮಣ್ಣನಾಯಕನ ಕಾಲದಿಂದ ಶಾಸನಗಳು ದೊರೆಯುವುದರಿಂದ, ಚಿತ್ರದುರ್ಗ ಪಾಳೆಯಗಾರರ ಖಚಿತವಾದ ಇತಿಹಾಸ ಇವನಿಂದಲೇ ಪ್ರಾರಂಭವಾಗುತ್ತದೆ. ತಿಮ್ಮಣ್ಣನಾಯಕನು ಚಿತ್ರದುರ್ಗವನ್ನು 24 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದನು. ತನ್ನ ಕಂಪಳದ ಸಮೇತ ಹಣವನಹಳ್ಳಿಯಲ್ಲಿದ್ದ ತಿಮ್ಮಣ್ಣನಾಯಕ ಕ್ರಿ.ಶ. 1556 ರಲ್ಲಿ ವಿಜಯನಗರದ ಸಾಳುವ ನರಸಿಂಹರಾಯನಿಂದ ಹಿರಿಯೂರಿನ ಅಮರನಾಯಕತನವನ್ನು ಪಡೆದಿದ್ದನು. ಕ್ರಿ.ಶ. 1563 ರಲ್ಲಿ ಹೊಳಲ್ಕೆರೆಯ ಅಮರನಾಯಕತನವನ್ನು ಪಡೆದಿದ್ದ ಇವನು ಗೋಪಾಲದೇವರ ದೇವಾಲಯವನ್ನು ಕಟ್ಟಿಸಿದ್ದನು. ಕ್ರಿ.ಶ. 1571 ರಲ್ಲಿ ರಂಗಪಟ್ಟಣವನ್ನು ಕಟ್ಟಿಸಿದ್ದನು. ಕ್ರಿ.ಶ. 1573 ರಲ್ಲಿ ತರೀಕೆರೆಯ ಪಾಳೆಯಗಾರ ಪೂವ್ವಲ ಹನುಮಪ್ಪನಾಯಕನನ್ನು ಸೋಲಿಸಿ ಅಳಿಯ ರಾಮರಾಜಯ್ಯನಿಂದ ಚಿತ್ರದುರ್ಗದ ಅಮರನಾಯಕತನವನ್ನು ಪಡೆದು ಚಿತ್ರದುರ್ಗಕ್ಕೆ ಬಂದು ನೆಲೆಸಿದ್ದನು. ಈ ಸಂದರ್ಭದಲ್ಲಿ ‘ಶ್ರೀಮನ್ಮಹಾನಾಯಕಚಾರ್ಯ’ಎಂಬ ಸ್ಥಾನ ಗೌರವ ಪಡೆದುಕೊಂಡಿದ್ದನು. ಚಿತ್ರದುರ್ಗ ಬಳಿಯ ಅರಕೆರೆಯನ್ನು ಜೀರ್ಣೋದ್ಧಾರ ಮಾಡಿದ್ದನು. ಅದಕ್ಕೆ ‘ತಿಮ್ಮಣ್ಣನಾಯಕನ ಕೆರೆ’ ಎಂದು ಕರೆಯಲಾಗುತ್ತಿದೆ. ‘ರಸಸಿದ್ಧ’ರೆಂಬ ಸಿದ್ಧಪುರುಷರ ಅನುಗ್ರಹಕ್ಕೆ ಪಾತ್ರನಾಗಿದ್ದನು. ಕ್ರಿ.ಶ. 1574 ರಲ್ಲಿ ಚಿತ್ರದುರ್ಗದ ಮೇಲು ದುರ್ಗದಲ್ಲಿ ಅರಮನೆಯನ್ನೂ, ಅದರ ಸುತ್ತಲ ಕೋಟೆಯನ್ನು ಕಟ್ಟಿಸಿದ್ದನು. ಕ್ರಿ.ಶ. 1575 ರಲ್ಲಿ ವಿಜಯನಗರದರಸರು ತಿಮ್ಮಣ್ಣನಾಯಕನಿಗೆ ಚಿತ್ರದುರ್ಗದ ಅರಸು ತನವನ್ನು ಕೊಟ್ಟಿದ್ದರು. ಆನಂತರ ತಿಮ್ಮಣ್ಣನಾಯಕನು, ನೆಲ್ಲಿಕಾಯಿ ಸಿದ್ಧಪ್ಪನ ಕೋಟೆ, ಗುಡ್ಡದ ಸುತ್ತಿನ ಕೋಟೆ, ರಣ ಮಂಡಲದ ಸುತ್ತಿನ ಕೋಟೆ, ವನಕೆ ಕಂಡೀ ಬಾಗಿಲು, ಹನುಮಂತದೇವರ ಗುಡಿ, ಏಕನಾಥೇಶ್ವರಿ ಗುಡಿಗಳನ್ನು ಕಟ್ಟಿಸಿದ್ದನು. ಕ್ರಿ.ಶ. 1580 ರಲ್ಲಿ ವಿರೂಪಾಕ್ಷ ಜೋಯಿಸರನ್ನು ಸರ್ವಾಧಿಕಾರಿಯಾಗಿ ನೇಮಿಸಿ, ಇವನ ಮಕ್ಕಳಾದ ಯಲ್ಲಪ್ಪ ಮತ್ತು ಭೂಮಪ್ಪರನ್ನು ಶಾನಭೋಗರನ್ನಾಗಿ ನೇಮಿಸಿ, ಪ್ರತಿಯೊಂದು ಗ್ರಾಮಕ್ಕೂ ಗೌಡ, ತಳವಾರ, ಬೇಗಾರ ಮೊದಲಾದ ಆಯಗಾರರನ್ನು ನೇಮಿಸಿದ್ದನು. ಕ್ರಿ.ಶ. 1581 ರಲ್ಲಿ ತನ್ನ ಮೇಲೆ ಯುದ್ಧಕ್ಕೆ ಬಂದಿದ್ದ ಸಾಳುವ ನರಸಿಂಹನ ಪಟ್ಟದ ಕುದುರೆಯನ್ನೇ ಅಪಹರಿಸಿ ಸೋಲಿಸಿದ್ದನು. ಕ್ರಿ.ಶ. 1582 ರಲ್ಲಿ ವಿಜಯನಗರದರಸರು ಇವನನ್ನು ತಮ್ಮ ಸಾಮಂತನನ್ನಾಗಿ ಅಂಗೀಕರಿಸಿದ್ದರು. ಕ್ರಿ.ಶ. 1582 ರಲ್ಲಿ ವಿಜಯನಗರದ ದಂಡನಾಯಕ ಸಾಳುವ ನರಸಿಂಹ ಕಲ್ಬುರ್ಗಿಯನ್ನು ವಶಪಡಿಸಿಕೊಳ್ಳುವಲ್ಲಿ ವಿಫಲನಾಗಿದ್ದನು. ಪರಿಣಾಮ ದೊರೆಗಳ ಅಪ್ಪಣೆಯ ಕಾರಣ ಕ್ರಿ.ಶ. 1583 ರಲ್ಲಿ ತಿಮ್ಮಣ್ಣನಾಯಕ ತನ್ನ ಅಣ್ಣಗಾರ ಓಬಳನಾಯಕ ಮತ್ತು ಸೈನಿಕರೊಡಗೂಡಿ ಕಲ್ಬುರ್ಗಿಯನ್ನು ಗೆದ್ದುಕೊಟ್ಟನು. ಇದಕ್ಕೆ ಪ್ರತಿಯಾಗಿ ವಿಜಯನಗರದರಸರು ಚಿನ್ನದ ಲೇಪನದ ಶಂಖು, ಚಕ್ರ, ಅಂದಳ, ಮೊಸಳೆಬಾಯಿ ಕೋಡು, ಫಿರಂಗಿ, ಸುತ್ತಿಗೆ, ಚಿನ್ನದ ಹಸ್ತ, ಹಗಲು ದೀವಟಿಗೆ ಮುಂತಾದ ಉಡುಗೊರೆಗಳೊಂದಿಗೆ “ಹಗಲು ಕಗ್ಗೊಲೆ ಮಾನ್ಯ” ಎಂಬ ಬಿರುದನ್ನು ನೀಡಿ ಗೌರವಿಸಿದ್ದರು. ತಿಮ್ಮಣ್ಣನಾಯಕನ ವಿರೋಧಿಗಳಿಂದ ಬಂದಿದ್ದ ಇಲ್ಲ ಸಲ್ಲದ ಪಿತೂರಿಗಳನ್ನು ನಂಬಿ ವಿಜಯನಗರದ ದೊರೆ, ತಿಮ್ಮಣ್ಣನಾಯಕ ಮತ್ತು ಅಣ್ಣಗಾರ ಓಬಳನಾಯಕರನ್ನು ಬಂಧನದಲ್ಲಿಟ್ಟಿದ್ದರು. ಕ್ರಿ.ಶ. 1589 ರಲ್ಲಿ ಸೆರೆಮನೆಯಲ್ಲಿಯೇ ಮತ್ತಿ ತಿಮ್ಮಣ್ಣನಾಯಕ ಮರಣ ಹೊಂದಿದ್ದನು.