Picture by: Maruthi H

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರುವ ನೆಲಮಂಗಲ ತಾಲ್ಲೂಕಿಗೆ ದಾಬಸ್‌ಪೇಟೆಯಿಂದ ಐದಾರು ಕಿಲೋಮೀಟರ್ ದೂರದಲ್ಲಿರುವ ಮಣ್ಣೆಯ ಗ್ರಾಮವು ಒಂದು ಕಾಲದಲ್ಲಿ ಗಂಗರ ರಾಜಧಾನಿಯಾಗಿತ್ತು. ನಮ್ಮ ಬೆಂಗಳೂರಿನ ಹಿತ್ತಲಲ್ಲೇ ಇದ್ದರೂ ಮಣ್ಣೆ ನಮ್ಮ ದಿವ್ಯನಿರ್ಲಕ್ಷ್ಯದಿಂದ ಅವ್ಯವಸ್ಥೆಯಲ್ಲೇ ಉಳಿದಿದೆ. ಇಂದಿನ ಪೀಳಿಗೆಗೆ ಮಣ್ಣೆಯ ಇತಿಹಾಸ ತಿಳಿಸುವ ಅಗತ್ಯತೆಯಿದೆ. ಈ ನಾಡಿನ ಇತಿಹಾಸವನ್ನು ಅರಿತವರಿಗೆ ಮಣ್ಣೆಯೂ ಸುಪರಿಚಿತವಾಗಿರುತ್ತದೆ. ನಾಡಿನ ಹೆಮ್ಮೆಯ ರಾಜವಂಶಗಳಲ್ಲಿ ಒಂದಾದ ಗಂಗರಸರ ಉಪರಾಜಧಾನಿಯಾಗಿ. ಶ್ರೀಪುರುಷನ ತರುವಾಯ ರಾಷ್ಟ್ರಕೂಟರ ಆಡಳಿತಕ್ಕೆ ಸೇರಿದ್ದ ಮಾನ್ಯಖೇಟವಾಗಿ ೭ನೇ ಶತಮಾನದ ವೇಳೆಗಾಗಿ ರಾಜಕೀಯವಾಗಿ ಮಾತ್ರವಲ್ಲದೆ, ಸಾಂಸ್ಕೃತಿಕವಾಗಿಯೂ ಪ್ರಸಿದ್ಧತೆ ಪಡೆದಿತ್ತು.

ಗಂಗರ ವಾಸ್ತುಶಿಲ್ಪದ ಶ್ರೀಮಂತಿಕೆಯ ತಿಳಿಸುವ ಗುಡಿಗೋಪುರಗಳು ಇಂದು ಅವಶೇಷಗಳಾಗಿ ಎರೆಡು ಕೆರೆಯ ದಡದ ಮೇಲೆ ಅಳಿದುಳಿದು ನಿಂತಿವೆ. ಪ್ರಸುತ್ತ ರಸ್ತೆಯ ಬದಿಯಲ್ಲಿ ಕಪಿಲೇಶ್ವರ ದೇವಾಲಯ ಇದೆ.

ಇದೆ ಕಪಿಲೇಶ್ವರ ದೇವಾಲಯ ಎದುರುಗೆ ಕೆರೆಯ ದಡದ ಮೇಲೆಯೇ ಅಕ್ಕತಂಗಿಯ ದೇವಾಲಯ. ಹಾಗೇ ಗ್ರಾಮದ ಒಳಭಾಗದಲ್ಲಿ ಶ್ರೀ ವಿಜಯ ಜಿನಾಲಯ ಅಥವಾ ಪ್ರಸುತ್ತ ಸ್ಥಳೀಯರು ಕರೆಯುವ ಸೂಳೆಯರ ಗುಡಿ. ಕರೆಯ ಏರಿಯಮೇಲೆ ಸಪ್ತಮಾತೃಕೆಯರ ಶಿಲ್ಪಗಳು. ಸೋಮೇಶ್ವರ ದೇವಾಲಯ. ಅಲ್ಲಿಯೇ ಇರುವ ಪ್ರಾಚೀನ ಕಾಲದ ಕಲ್ಯಾಣಿಯೊಂದು ಉಳಿದುಕೊಂಡಿದೆ. ಪ್ರಸುತ್ತ ಈಗ ಜೀರ್ಣೋದ್ದಾರ ಹೆಸರಿನಲ್ಲಿ ಕಲ್ಯಾಣಿಯನ್ನು ಸಿಮೆಂಟ್ ಕಾಂಕ್ರೀಟ್ ಯಿಂದ ಆವೃತಗೊಳಿಸಿರುವ ಕಾರಣ ಇತ್ತೀಚಿಗೆ ನಿರ್ಮಿಸಿದ ಕಲ್ಯಾಣಿಯಂತೆ ಗೋಚರಿಸುತ್ತದೆ.

ಗಂಗರ ಪ್ರಾಚೀನ ದೇವಾಲಯಗಳ ಅಧಿಷ್ಠಾನದ ಭಾಗ ಇಟ್ಟಿಗೆಯಿಂದ ನಿರ್ಮಾಣವಾಗುತ್ತಿತ್ತು ಎಂದು ಮಣ್ಣೆಯ ಕಪಿಲೇಶ್ವರ ದೇವಾಲಯದ ತಳಪಾಯ ನೋಡಿದರೆ ತಿಳಿದು ಬರುತ್ತದೆ. ಈ ಕಪಿಲೇಶ್ವರ ದೇವಾಲಯ ದ್ವಾರಪಾಲಕ ವಿಗ್ರಹಗಳು ಆಕರ್ಷಕವಾಗಿವೆ. ಈಗಲೂ ಉಳಿದುಕೊಂಡಿರುವ ಎರೆಡು ಜಾಲಂಧ್ರಗಳು ಶಿಲ್ಪಕಲಾ ಸೊಗಸು ಇಮ್ಮಡಿಗೊಳಿಸುತ್ತದೆ. ಪ್ರಸುತ್ತ ಗುಡಿಯಲ್ಲಿ ಯಾವುದೇ ವಿಗ್ರಹ ಕಂಡುಬರುವುದಿಲ್ಲ. ಗಂಗರ ವಾಸ್ತುಶಿಲ್ಪದ ಕಂಬಗಳು ಕಂಡುಬರುತ್ತವೆ.

Picture by: Maruthi H

ಮಣ್ಣೆಯಲ್ಲಿ ಸೂರ್ಯ ದೇವಾಲಯವೊಂದು ಕ್ರಿ.ಶ. ೮೦೧ರ ವೇಳೆಗೆ ನಿರ್ಮಾಣವಾಗಿತ್ತು. ಈಗ ಸೂರ್ಯನ ದೇವಸ್ಥಾನದ ಗುರುತುಗಳೂ ಇಲ್ಲ. ಆದರೆ ಸೂರ್ಯ ದೇವಾಲಯ ಇತ್ತು ಅನ್ನೋದಕ್ಕೆ ತಾಮ್ರಶಾಸನವೊಂದಲ್ಲಿ ಮಾರಸಿಂಹನ ಆಳ್ವಿಕೆಯ ಕಾಲಕ್ಕೆ ಸೇರಿರುವ ಈ ಶಾಸನದಲ್ಲಿ ಮಾನ್ಯಪುರದ ಶ್ರೇಷ್ಠಿಗಣ ನಿರ್ಮಿಸಿದ್ದ ಆದಿತ್ಯ ದೇವಾಲಯಕ್ಕೆ ಪೊನ್ನುಡಿಕೆ ವಿಷಯದ ಮಸೆಕ್ಕಲಿ ಎಂಬ ಗ್ರಾಮವನ್ನು ನೀಡಿರುವುದು ತಿಳಿದು ಬರುತ್ತದೆ. ಇದಕ್ಕೆ ಪೂರಕವಾಗಿ ಮನ್ನೆಯಲ್ಲೊಂದು ಸೂರ್ಯ ವಿಗ್ರಹ ಸಿಕ್ಕಿದೆ ಅಂತೇಳುತ್ತಾರೆ. ಪ್ರೊ. ಕ. ವೆಂ ರಾಜಗೋಪಾಲ ಅವರು ಈಗಿರುವ ಕಪಿಲೇಶ್ವರ ದೇವಾಲಯವೇ ಸೂರ್ಯ ದೇವಾಲಯ ಆಗಿತ್ತೆಂದು ಹೇಳುತ್ತಾರೆ. ಆದರೆ ಇದನ್ನೂ ಒಪ್ಪಿಕೊಳ್ಳಲು ಆಗುವುದಿಲ್ಲ.

ಮಣ್ಣೆಯಲ್ಲಿರುವ ಮತ್ತೊಂದು ಐತಿಹಾಸಿಕ ಸ್ಮಾರಕವೆಂದರೆ ಜಿನಾಲಯ. ಈ ಸೂರ್ಯ ದೇವಾಲಯ ನಿರ್ಮಾಣಕ್ಕೂ ನಾಲ್ಕು ವರ್ಷಗಳ ಮೊದಲು ಜಿನಾಲಯದ ಪ್ರತಿಷ್ಠಾಪನೆ ಆಗಿತ್ತು. ಈ ಜಿನಾಲಯವನ್ನು ಶ್ರೀ ವಿಜಯ ಜಿನಾಲಯ ಅರ್ಥಾತ್ ಈಗಿನ ಸೂಳೆಯರ ಗುಡಿ ಎಂದು ಕರೆಯುತ್ತಾರೆ. ಈ ಜಿನಾಲಯವನ್ನು ಕ್ರಿ.ಶ. ೭೯೭ರ ಯುವರಾಜ ಮಾರಸಿಂಹನ ಶಾಸನದ ಪ್ರಕಾರ ಮಾರಸಿಂಹನ ಅನುಮತಿಯಂತೆ ಶ್ರೀ ವಿಜಯ ಎಂಬ ಅಧಿಕಾರಿಯು ಮಾನ್ಯಪುರದಲ್ಲಿ ಜಿನಾಲಯವನ್ನು ನಿರ್ಮಾಣ ಮಾಡಿಸಿದ. ಈ ಬಸದಿಗೆ ದೇವೈಭೋಗವಾಗಿ ಕಿರುವೆಕ್ಕೂರ ಗ್ರಾಮವನ್ನು ದಾನ ನೀಡಿದ ವಿವರಗಳನ್ನು ಶಾಸನವೊಂದಿದೆ. ಇದೆ ಗ್ರಾಮದಲ್ಲಿ ಮತ್ತೊಂದು ಶಾಸನ ರಾಷ್ಟ್ರಕೂಟರ ಪ್ರಭೂತವರ್ಷನನ್ನು ಉಲ್ಲೇಖಿಸುತ್ತದೆ. ಈ ಕಾರಣಕ್ಕೆ ಎಂ ಎಂ ಕಲ್ಬುರ್ಗಿಯವರು ಇಲ್ಲಿ ಬರುವ ಜಿನಾಲಯ ಕಟ್ಟಿಸಿದ ಶ್ರೀ ವಿಜಯ. ಕವಿರಾಜಮಾರ್ಗ ರಚಿಸಿದ ಶ್ರೀ ವಿಜಯ ಇಬ್ಬರು ಒಬ್ಬರೇ ಎಂಬ ವಾದವನ್ನು ಮಂಡಿಸಿದ್ದಾರೆ. ಆದರೆ ಈ ವಾದವನ್ನು ಒಪ್ಪಲು ಆಗದು. ಬಿಡಲು ಆಗದು ಆರೀತಿ ಇದೆಯೆಂದು ಹೇಳಬಹುದು. ಈ ಶ್ರೀ ವಿಜಯ ಜಿನಾಲಯದ ನವರಂಗದ ಒಳಛಾವಣಿಯಲ್ಲಿ ಕಂಡು ಬರುವ ಧರಣೇಂದ್ರ ಯಕ್ಷ ಶಿಲ್ಪವೂ ೨೩ನೇಯ ತೀರ್ಥಂಕರನಾದ ಪಾರ್ಶ್ವನಾಥನ ಯಕ್ಷವಾಗಿದೆ. ಆದ್ದರಿಂದ ಈ ಜಿನಾಲಯವು ಪಾರ್ಶ್ವನಾಥ ಬಸದಿಯಾಗಿತ್ತೆಂದು ಹೇಳಬಹುದು.

Picture by: Maruthi H

ಕಪಿಲೇಶ್ವರ ದೇವಾಲಯ ಎದುರುಗಡೆ ಇರುವ ಕರೆಯ ದಡದಲ್ಲಿರುವ ಅಕ್ಕತಂಗಿ ದೇವಾಲಯವೂ ಪ್ರಸುತ್ತ ಶಿಥಿಲಾವ್ಯವಸ್ಥೆಯಲ್ಲಿದೆ. ಅಲ್ಲಿ ಯಾವುದೇ ವಿಗ್ರಹಗಳು ಕಂಡು ಬರುವುದಿಲ್ಲ. ಮಣ್ಣೆಯ ಕರೆಯ ಏರಿಯ ಮೇಲೆ ಸಪ್ತಮಾತೃಕೆಯರ ಶಿಲ್ಪಗಳು ಇವೆ. ಊರಿನ ಸರ್ಕಾರಿ ಶಾಲೆ ಆವರಣದಲ್ಲಿ ಕೆಲವೊಂದು ಶಾಸನಗಳು. ಕಾಳಿ ಇತರೆ ಶಿಲ್ಪಗಳು. ವೀರಗಲ್ಲುಗಳು. ಮಾಸ್ತಿಗಲ್ಲುಗಳನ್ನು ಸಂರಕ್ಷಣೆ ಮಾಡಿದ್ದಾರೆ.

ಒಂದರ್ಥದಲ್ಲಿ ಹೇಳುವುದಾರೆ ಮಣ್ಣೆಯಲ್ಲಿ ಶೈವ, ವೈಷ್ಣವ, ಜೈನ, ಸೌರ ಪಂಥಗಳ ಕೇಂದ್ರವಾಗಿತ್ತು ಅನಿಸುತ್ತೆ. ಇತಿಹಾಸ ಆಸಕ್ತರು ಭೇಟಿಕೊಡಬೇಕಾದ ಸ್ಥಳಗಳಲ್ಲಿ ಮಣ್ಣೆಯೂ ಒಂದಾಗಿದೆ. ಹೋಗಿಬನ್ನಿ.

ಮಣ್ಣೆಯಲ್ಲಿರುವ ಗುಡಿಗೋಪುರಗಳ ಜೀರ್ಣೋದ್ದಾರಕ್ಕೆ ಸರ್ಕಾರಗಳು, ಸ್ಥಳೀಯ ಆಡಳಿತ ವ್ಯೆವಸ್ಥೆ ಹಾಗೂ ಸ್ಥಳೀಯರು ಇದರ ಕಡೆ ಗಮನಹರಿಸಬೇಕು. 

.    .    .

Discus