ಬಸವ, ಬಸವಣ್ಣ, ಬಸವೇಶ್ವರ ಎಂಬ ಹೆಸರೇ ಒಂದು ಬಗೆಯ ರೋಮಾಂಚನ, ಸಮಸಮಾಜದ ಕನಸುಗಾರ, ಪ್ರಗತಿಪರ ಚಿಂತಕ, ಶರಣ ಪರಂಪರೆಯ ಹರಿಕಾರ, ವಚನ ಸಾಹಿತ್ಯದ ನೇತಾರ, ಕನ್ನಡ ಭಾಷೆಗೆ ಅಸಾಮಾನ್ಯ ಶಕ್ತಿ ತುಂಬಿದ ವಿದ್ವಾಂಗ ಜನಭಾಷೆಯಲ್ಲಿ ವಚನಗಳ ಮೂಲಕ ಸಂವಹನ ನಡೆಸಿದ ಜನಪದವೂ ಬಸವಣ್ಣನೇ ಆಗಿದ್ದಾನೆ. ಬಸವಣ್ಣ ಚಿಕ್ಕಂದಿನಲ್ಲಿ ನನಗೆ ಕಂಡದ್ದು ನನ್ನ ಮನೆಯ ಕೃಷಿಯ
ಒಡನಾಡಿಗಳಾದ ಎತ್ತುಗಳ ರೂಪದಲ್ಲಿ, ನನ್ನ ಅಪ್ಪ ಅಣ್ಣಂದಿರು ಗುಡಿ ನಡೆಸುವಾಗ, ಓಡುತ್ತಿದ್ದ ಎತ್ತುಗಳು ಮುಗ್ಗರಿಸಿದಾಗ ಅವರ ಬಾಯಿಯಲ್ಲಿ ಹೊರಡುತ್ತಿದ್ದ 'ಬಸವಾ' ಎಂಬ ಶಬ್ದದಿಂದ ಅವರ ಕೆಲಸಕಾರ್ಯಗಳಲ್ಲಿ ಏನೇ ಅಡೆತಡೆಗಳಾದರೂ ತಕ್ಷಣ ಬರುತ್ತಿದ್ದ ಮಾತು ಬಸವಾ ಎಂಬುದೇ ಆಗಿತ್ತು. ಅಷ್ಟರಮಟ್ಟಿಗೆ ಬಸವಣ್ಣ ನಮ್ಮ ಕೃಷಿ ಬದುಕಿನಲ್ಲಿ ಮನೆಮಾಡಿದ್ದಾನೆ. ಹಾಗೆಯ ನಮಗೆ ಚಿಕ್ಕಂದಿನಲ್ಲಿ ಬಸವಣ್ಣ ನೆನಪಾಗುತ್ತಿದ್ದುದು ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ಆಚರಿಸುತ್ತಿದ್ದ ಬಸವ ಜಯಂತಿಯಂದು ಅಂದು ಹಿಂಗಾರಿನ ಜೋಳದ ಹೊಲದಲ್ಲಿ ತಿಂಗಳುಗಟ್ಟಲೆ ಮೇಯಿಸಿದ ಎತ್ತುಗಳು ಮೈತುಂಬಿಕೊಂಡ ಸಂದರ್ಭ, ಹುಲುಸಾಗಿ ಬೆಳೆಸಿದ ಮನೆಯ ಹೋರಿಗಳ ಮೈಯನ್ನು ತಿಕ್ಕಿ ತೊಳೆದು, ಹೊಳದು ನೀಡಿ, ಅವುಗಳ ಕೊಂಬು-ಗೊರಸುಗಳಿಗೆ ಅರಸಿಣದ ಎಣ್ಣೆಯನ್ನು ಹಚ್ಚಿ, ಗೆಜ್ಜೆ- ಕೋಣಸು-ಲೊಡಗಗಳನ್ನು ತೊಡಿಸಿ, ಮೈತುಂಬಾ ಮೂಲನ್ನು ಹೊದಿಸಿ ಸಿಂಗರಿಸಿ ಆಚರಿಸುತ್ತಿದ್ದ ಈ ಹಬ್ಬದಂದು ನಮಗೆ ಬಸವನ ನೆನಪಾಗುತ್ತಿತ್ತು ಬಸವಣ್ಣ ಎಂದರೆ 12ನೇ ಶತಮಾನದ ಬಸದನಲ್ಲ, ನಮಗೆ ಬಸವನೆಂದರೆ ನಮ್ಮ ಮನೆಯ ಎತ್ತ ಆಗಿತ್ತು. ಇದಕ್ಕೆ ಬಸವಣ್ಣನನ್ನು ಶಿವನ ವಾಹನ ನಂದಿಯ ರೂಪದಲ್ಲಿ ನೋಡಿರುವುದೂ ಇರಬಹುದು. ಆದರೆ 12ನೇ ಶತಮಾನದ ಬಸವಣ್ಣ ಮಾಡಿದ ಕ್ರಾಂತಿ ಅಸಾಧರಣವಾದದ್ದು, ಶತಶತಮಾನಗಳಿಂದ ಬಂದ ಸ್ಪಶ್ಯ-ಅಸತ್ಯ ಪರಂಪರೆಯನ್ನು ಅರಿತು, ನವ ಸಮಾಜದೆಡೆಗೆ ಕೊಂಡೊಯ್ಯುವ ಸವಾಲನ್ನು ಸ್ವೀಕರಿಸಿ ಅನುಷ್ಠಾನಗೊಳಿಸಿದ್ದುದು ಗಮನಾರ್ಹ.
ಸಮತೋಲನಕ್ಕಾಗಿ ಹೋರಾಡಿದ ನೇತಾರ, ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಆರಿಸಿಹೊರಟ ದಾರ್ಶನಿಕ ಜಾಗತಿಕ ಇತಿಹಾಸವನ್ನು ಅವಲೋಕಿಸಿದಾಗ ಹೊಸಧರ್ಮಗಳ ಉದಯದ ಹಿಂದೆ ಆಯಾ ಕಾಲದ ಸಾಮಾಜಿಕ, ಧಾರ್ಮಿಕ ಕಹಿಘಟನೆಗಳು ಕಾರಣವಾಗಿದೆ. ಇದಕ್ಕೆ ತ್ರಿಸೂ ಆರನೆಯ ಶತಮಾನವನ್ನು ಉದಾಹರಿಸಬಹುದು, ಜೈನ, ಬೌದ್ಧ ಧರ್ಮಗಳು ಭಾರತದಲ್ಲಿ, ಕನ್ ಡ್ಯೂಷಿಯಸ್ ಮತ್ತು ಲಾವೋತ್ಸೆ ಪಂಥಗಳನ್ನು ಚೀನಾದಲ್ಲಿ ಕಾಣುತ್ತೇವೆ. ಹಾಗೆಯೇ ಬಸವಣ್ಣನಿಗೆ ತಾನು ಹುಟ್ಟಿದ್ದ ಕಾಲವೂ ಅಂತಹ ಸನ್ನಿವೇಶವುಳ್ಳದೇ, ಅದು ಕಲ್ಯಾಣ ಚಾಲುಕ್ಯ ಅರಸರ ಆಡಳಿತದ ಉತ್ತುಂಗ ಕಾಲ, ಅದರಲ್ಲೂ ಆರನೇ ವಿಕ್ರಮಾದಿತ್ಯನ ಸುಮಾರು ಐವತ್ತಕ್ಕೂ ಹೆಚ್ಚು ವರ್ಷಗಳ ಸುದೀರ್ಘ ಆಳ್ವಿಕೆಯ ಸಂದರ್ಭ, ಈ ಅವಧಿಯಲ್ಲಿ ಧರ್ಮ, ದೇವಾಲಯ, ಅಗ್ರಹಾರ, ಮತಗಳ ಅತಿಯಾದ ಬೆಳವಣಿಗೆ ಮತ್ತು ಅವುಗಳ ಪೋಷಣೆಗೆ ನೀಡಿದ ಮಿತಿಮೀರಿದ ದಾನಪ್ರವೃತ್ತಿ ಇದಕ್ಕೆ ಅಂದಿನ ನೂರಾರ ದೇವಾಲಯ ಮತ್ತು ಸಾವಿರಾರು ಶಿಲಾಶಾಸನಗಳು ಸಾಕ್ಷಿಯಾಗಿವೆ. ಈ ಹಿನ್ನೆಲೆಯಲ್ಲಿ ನೆಲೆಯೂರಿದ್ದ ದೇವರು-ಧರ್ಮ-ನಂಬಿಕೆ
ಆಚರಣೆಗಳು ಜನಸಾಮಾನ್ಯರನ್ನು ಅಧೋಗತಿಗೆ ತಳ್ಳಿದ ದೇವಾಲಯ-ಅಗ್ರಹಾರ-ಮಠ ಸಂಸ್ಕೃತಿಯ ಉನ್ಮಾದದ ಸ್ಥಿತಿ. ದೇವರು-ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಧಾರ್ಮಿಕ ಮತ್ತು ಸಾಮಾಜಿಕ ಶೋಷಣೆ ಎಲ್ಲೆಮೀರಿದ್ದಿತು. ಅಂದಿನ ಅಗ್ರಹಾರಗಳ ಬೆಳವಣಿಗೆಯನ್ನು ಗಮನಿಸಿದರೆ ಗ್ರಾಮಗಳಲ್ಲಿ ಹತ್ತರಿಂದ ಹಿಡಿದು ಸಾವಿರದವರೆಗೂ ಇದ್ದ ಮಹಾಜನರು, ಇವರದು ದುಡಿಮೆಯ ಮಾರ್ಗವಾಗಿರದೆ, ದುಡಿಸಿಕೊಳ್ಳುವ ವರ್ಗವಾದದ್ದು ದೇವರು ಧರ್ಮಗಳ ಹೆಸರಿನಲ್ಲಿ ನಂಬಿಕೆ, ಆಚರಣೆ, ಉತ್ಸವ, ಯಜ್ಞ ಯಾಗಾದಿಗಳಿಂದ ಸಾಮಾಜಿಕ ಶೋಷಣೆ: ದೇವದಾಸಿ, ಶಕ್ತಿ, ಬಾಲ್ಯ ವಿವಾಹ, ಮೇಲು-ಕೀಳು, ಬಡವ-ಬಲ್ಲಿದ, ವರ್ಣ ವರ್ಗಗಳ ಮಧ್ಯೆ ಬಹುದೊಡ್ಡ ಕಂದರವೇ ಏರ್ಪಟ್ಟಿದ್ದಿ ಇದರಿಂದ ಸಮಾಜದಲ್ಲಿ ದುಡಿಯುವ ಮತ್ತು ಕೂತು ಉಣ್ಣುವ ವರ್ಗಗಳು ನಿರ್ಮಾಣವಾದದ್ದು ಕಾರಣವಾಗಿರಬೇಕು, ಪುರೋಹಿತಶಾಹಿಯ ಪಾರಮ್ಯವು ಸಮಾಜದ ಇತರರನ್ನು ಕೀಳಾಗಿ ಕಾಣುತ್ತಿದ್ದ ಸಂದರ್ಭಗಳು ಬಸವಣ್ಣನ ಮನ:ಪರಿವರ್ತನೆಗೆ ಕಾರಣಗಳಾಗಿದ್ದವು.
ಇವು ಬಸವಣ್ಣನ ವಚನಗಳಲ್ಲಿ ಮಿಳಿತಗೊಂಡ ಸಂಗತಿಗಳೇ ಆಗಿದೆ. ಬಸವಣ್ಣ ಸಾರಿದ ತತ್ವ, ಅನುಸರಣೆಗಳು ಸರಳವಾದಂಥವು. ಕಾಯಕದ ಹಿನ್ನಡೆಯನ್ನು ತಡೆಯಲು, ಸ್ವರ್ಗ-ನರಕ, ಕೈಲಾಸ ವೈಕುಂಶಗಳು ಬೇರಿಲ್ಲವೆಂದು, ತಾವು ಮಾಡುವ ಕಾಯಕವನ್ನ ಕೈಲಾಸವಾಗಿಸಿದ ಮಹಾತ್ಮ, ಸಾವಿರಾರು ದೇವಾಲಯಗಳಿದ್ದರೂ ಅದರ ಪ್ರವೇಶಕ್ಕೆ ಇದ್ದ ನಿಷೇಧವನ್ನು ತೊಡೆಯಲು ಅಂಗೈಯಲ್ಲಿ ಲಿಂಗವಿಟ್ಟು ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲವೆಂದ ಆ ಮೂಲಕ ಕಾಲನ್ನು ಕಂಬಮಾಡಿ, ದೇಹವನ್ನೇ ದೇಗುಲವಾಗಿಸಿ ಶಿರವನ್ನು ಹೊನ್ನಿನ ಕಳಸವನ್ನಾಗಿಸಿದ ಧರ್ಮ ಸುಧಾರಕ ಬಸವಣ್ಣ, ಸಮಾಜದಲ್ಲಿನ ದಬ್ಬಾಳಿಕೆಗೆ ಉತ್ತರವಾಗಿ ದಯೆ, ಕರುಣೆಗಳಿಗೆ ದಾರಿಯಾಗಿ ದಯವೇ ಧರ್ಮದ ಮೂಲವೆಂದು ಸಾರಿದ, ಜಾತಿ-ವಿಜಾತಿ, ಮೇಲು-ಕೀಳು, ಸತ್ಯ-ಅಸ್ಪಶ್ಯಗಳನ್ನು ತೊಡೆಯಲು ಪಣತೊಟ್ಟ ಸಮಾಜಶಾಸ್ತ್ರಜ್ಞ ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಪಾರುವನಾದ ಎನ್ನುವ ಮೂಲಕ ವೃತ್ತಿ ಹುಟ್ಟಿನಿಂದ
ಬಂದದ್ದಲ್ಲವೆಂದು ಅವುಗಳ ಬೆಳವಣಿಗೆಯ ಸತ್ಯವನ್ನು ಸಾರಿ ಗೌರವಿಸಿದ ಅರ್ಥಶಾಸ್ತ್ರಜ್ಞ ದುಡಿದ ಸಂಪಾದನೆಗೆ ದಾಸೋಹವೆಂಬ ಹಂಚಿ ತಿನ್ನುವ ಪರಿಕಲ್ಪನೆಯನ್ನು ಸಾಕಾರಗೊಳಿಸಿದ, ಮಾತನ್ನು ವಚನವಾಗಿಸಿದ ಕೀರ್ತಿ ಬಸವಣ್ಣನದು ನುಡಿಗೆ ಶ್ರೇಷ್ಠತೆ ನೀಡಿದ ಬಸವ, ನುಡಿದಡೆ ಲಿಂಗಮೆಚ್ಚಿ ಅಹುದಹುದು ಎನ್ನಬೇಕೆಂದ ಹೋಮ-ಹವನ-ಯಜಯಾಗಾದಿಗಳ ಮೂಲಕ ವ್ಯಯವಾಗುತ್ತಿದ್ದ ಅನ್ನಾಹಾರ, ತುಪ್ಪ, ದೂಪಗಳನ್ನು ಖಂಡಿಸಿ ಕಲ್ಲಿನ ಮೂರ್ತಿಗೆ ಎರೆಯುತ್ತಿದ್ದ ಹಾಲನ್ನು ಕಂಡು ಕರುಬಿದ ಕಲ್ಲನಾಗರ ಕಂಡರೆ ಪಾಲನೆರೆಯೆಂಬರು, ದಿಟದ ನಾಗ ಕಂಡಡೆ ಕೊಲ್ಲೆಂಬರಯ್ಯಾ ಎನ್ನುವ ಮೂಲಕ ಸಮಾಜದ ಡೊಂಕನ್ನು ಎತ್ತಿಹೇಳಿದ ಧೀಮಂತ, ಸಮಾಜದ ಎಲ್ಲವನ್ನೂ ಒಳಗೊಳ್ಳುವಂತೆ ಮಾಡುವ ಅವನ ಒತ್ತಾನೆ, ಇವನಾರವ ಇವನಾರವ ಎಂದೆನಿಸದಿರಯ್ಯ, ಇವನಮ್ಮವ ಇವನಮ್ಮವ ಎಂದೆನಿಸಯ್ಯ, ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಎನ್ನುವ ಮೂಲಕ ಆತ್ಮವಿಮರ್ಶೆಗೆ ಒತ್ತು ನೀಡುತ್ತಾನೆ. ಬಹುದೇವತಾ ಆರಾಧನೆಯನ್ನು ಹೀಗಳದ ಬಸವ ಮಡಿಕೆ ದೈವ, ಮೊರ ದೈವ, ಬೀದಿಯ ಕಲ್ಲ ದೈವ, ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೋ ಕೊಳಗೆ ದೈವ, ಗಿಣ್ಣಿಲು ದೈವ ಕಾಳೇರೋ, ದೈವ ದೈವವೆಂದು ಕಾಲಿಡಲಿಂಬಿಲ್ಲ ದೈವನೊಬ್ಬನೆ ಕೂಡಲ ಸಂಗಮದೇವ ಎನ್ನುವ ಮೂಲಕ ಇಷ್ಟಲಿಂಗಕ್ಕೆ ಆದ್ಯತೆ ನೀಡಿದ್ದಾನೆ. ವಚನವೊಂದರಲ್ಲಿ ವಾರವೆಂದರಿಯೆ, ದಿನವೆಂದರಿಯೆ ಏನೆಂದರಿಯೆನಯ್ಯಾ ಇರುಳೆಂದರಿಯೆ, ಹಗಲೆಂದರಿಯೆ ಏನೆಂದರಿಯೆನಯ್ಯಾ, ನಿಮ್ಮ ಪೂಜಿಸಿ ಎನ್ನುವ ಮರೆದೆ ಕೂಡಲಸಂಗಮದೇವಾ ಎನ್ನುವ ಮೂಲಕ ವಾರ-ತಿಥಿ-ನಕ್ಷತ್ರಗಳೆಂದು ಶುಭ-ಅಶುಭ ದಿನವೆಂಬ ಮೌಢ್ಯೆತೆಯನ್ನು ನಿರಾಕರಿಸುತ್ತಾನೆ. ಪುರಾಣ, ಶಾಸ್ತ್ರ, ವೇದ, ಉಪನಿಷತ್ತುಗಳ ಸತ್ಯಾಸತ್ಯತೆಯನ್ನು ಕುರಿತು ಹೇಳುತ್ತಾ, ಆದಿರಾಜ ಆರರಿಗೆ ಮಾರಿ, ವೇದಪುರಾಣ ಹೋತಿಂಗ ಮಾರಿ, ರಾಮಪುರಾಣ ರಕ್ಕಸರಿಗೆ ಮಾರಿ, ಭಾರತಪುರಾಣ ಗೋತ್ರಕ್ಕೆ ಮಾರಿ, ಎಲ್ಲಾ ಮರಾಣ ಕರ್ಮಕ್ಕೆ ಮೊದಲು ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ ಕೂಡಲಸಂಗಮದೇವಾ ಎನ್ನುವ ಮೂಲಕ ನವಸಮಾಜ ನಿರ್ಮಾಣಕ್ಕೆ ಇದ್ದ ಅಡೆತಡೆಗಳನ್ನು ಒತ್ತಿ ಹೇಳಿದ್ದಾನೆ. ಆ ಮೂಲಕ ಇಂದಿಗೂ ಅನುಸರಿಸಿ ಅರಿತು ನಡೆಯಬೇಕಾದ ಉದಾತ್ತ ಮಾರ್ಗವನ್ನು ಎಂಟುನೂರು ವರ್ಷಗಳ ಹಿಂದೆಯೇ ಹಾಕಿಕೊಟ್ಟಿರುವುದು ಗಮನಾರ್ಹ.
ಬನವಾಸಿಯು ಕರ್ನಾಟಕದ ಪ್ರಾಚೀನ ಮತ್ತು ಪ್ರಸಿದ್ಧ ಪಟ್ಟಣ: ಇದು ಸನ್ನತಿ ಮತ್ತು ಬ್ರಹ್ಮಗಿರಿಯಷ್ಟೇ ಪ್ರಸಿದ್ಧವಾದ ಪ್ರಾಚೀನ ಬೌದ್ಧ ನೆಲೆಯೂ ಆಗಿದೆ. ಬನವಾಸಿಯನ್ನು ಮಹಾಭಾರತದಲ್ಲಿ 'ವನವಾಸಕ' ಎಂದೂ, ಶಾಸನಗಳಲ್ಲಿ 'ವನವಾಸಿಕ', 'ಜಯಂತಿಪುರ', 'ವೈಜಯಂತಿ' ಬನವಾಸಿಪುರ ಎಂದೂ ಕರೆಯಲಾಗಿದೆ. ಪ್ರಾಚೀನ ಭಾರತಕ್ಕೆ ಭೇಟಿ ನೀಡಿದ್ದ ಗ್ರೀಕ್ ಪ್ರವಾಸಿ ಟಾಲಮಿಯು ಇದನ್ನು 'ಬನೌಸಿ' ಎಂದೇ ಕರೆದಿರುವನು. ಹಾಗೆಯೇ ಚೀನಾದ ಬೌದ್ಧ ಯಾತ್ರಿಕನಾದ ಹೂಯೆನ್ ತ್ಸಾಂಗನು 'ಕೊಂಕಿನಪುಲೋ (ಕೊಂಕಣಪುರ) ಎಂದು ಕರೆದುದಲ್ಲದೆ ಅಲ್ಲಿನ ಪ್ರಾಚೀನ ಬೌದ್ಧ ಸಂಘಾರಾಮ, ಸೂಪ ಮತ್ತು ಶ್ರೀಗಂಧದ ಬುದ್ದನ ಮೂರ್ತಿಗಳನ್ನು ಕುರಿತು ಪ್ರಸ್ತಾಪಿಸಿರುವುದು ಅಧ್ಯಯನಾರ್ಹ ಸಂಗತಿಯೇ ಆಗಿದೆ. ಮಧು ಮತ್ತು ಕೈಟಭರೆಂಬ ಸಹೋದರರು ಇಲ್ಲಿ ವಾಸವಿದ್ದರೆಂದೂ, ಪಾಂಡವರು ತಮ್ಮ ವನವಾಸವನ್ನು ಅಲ್ಲಿ ಕಳೆದರೆಂಬ ಪ್ರತೀತಿಗಳಿವೆ, ಬನವಾಸಿಯ ಆದಿಕವಿ ಪಂಪನ ತಾಯಿಯ ತವರೂರು, ತನ್ನ ವಿಕ್ರಮಾರ್ಜುನ ವಿಜಯಂ ಕೃತಿಯಲ್ಲಿ, 'ಮನುಷ್ಯನಾಗಿ ಹುಟ್ಟುವುದಕ್ಕೆ ಪುಣ್ಯಬೇಕು. ಈ ಪುಣ್ಯವಿಲ್ಲದಿದ್ದರೆ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಹುಟ್ಟುವುದು ನಂದನವನದೊಳ್ ಬನವಾಸಿದೇಶದೊಳ್ " ಎಂದು ಹಂಬಲಿಸಿದ್ದಾನೆ.
ಹಾಗೆಯೇ "ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಂ" ಎಂದು ನೆನೆಯುತ್ತಾನೆ. ಚಾಮರಸ ಬರೆದ ಪ್ರಭುಲಿಂಗಲೀಲೆ ಕಾವ್ಯದ ಪ್ರಮುಖ ಸ್ಥಳ ಬನವಾಸಿಯೇ ಆಗಿದೆ. ಬನವಾಸಿಯು ನಿಜಕ್ಕೂ ಈ ಬಣ್ಣನೆಗೆ ಶ್ರೇಯವೇ ಆಗಿದೆ. ಮಲೆನಾಡಿನ ಸೆರಗಿನಲ್ಲಿ ಹಸಿರನ್ನು ಹೊದ್ದು, ವರದಾ ನದಿಯು ವನಮಾಲೆಯಂತೆ ಸುತ್ತುವರಿದಿರುವುದು ಈ ಪಟ್ಟಣಕ್ಕೆ ಪ್ರಾಕೃತಿಕ ಸೊಬಗನ್ನು ಹೆಚ್ಚಿಸಿದೆ. ಬನವಾಸಿಯನ್ನು ಮೂರು ಕಡೆಗಳಲ್ಲಿ ಮಾಲೆಯಂತೆ ಸುತ್ತುವರಿದಿರುವುದರಿಂದ ವೈಜಯಂತಿ ಎಂಬ ಹೆಸರು ಭೌಗೋಳಿಕವಾಗಿ ಅನ್ವರ್ಥಕವಾಗಿದೆ.
ಬನವಾಸಿಯು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನಲ್ಲಿ ಬರುವ ಐತಿಹಾಸಿಕ ತಾಣ, ಇಲ್ಲಿನ ಮಧುಕೇಶ್ವರ ದೇವಾಲಯವು ಕರ್ನಾಟಕದ ಪ್ರಾಚೀನ ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಯ ಮಹತ್ವದ ಆಲಯವೂ ಆಗಿದೆ. ಕ್ರಿ.ಪೂ. 3ನೆಯ ಶತಮಾನದಲ್ಲಿ ಆಳ್ವಿಕೆ ಮಾಡಿದ ಮೌರ್ಯ ಆಶೋಕನ ಕಾಲದ ಹೊತ್ತಿಗೆ ಇದು ಪ್ರಸಿದ್ಧ ಧಾರ್ಮಿಕ ನೆಲೆಯಾಗಿತ್ತು. ಮೊಗ್ಗಲಿಪುತ್ತ ತಿಸ್ಸನು ಬೌದ್ಧ ಧರ್ಮ ಪ್ರಸಾರಕ್ಕಾಗಿ ರಬ್ಬಿತ ಎಂಬ ಬಿಕ್ಷುವನ್ನು ಇಲ್ಲಿಗೆ ಕಳುಹಿಸಿದ್ದುದು ಮಹಾವಂಶದಲ್ಲಿ ಹೇಳಿದೆ. ಮಹಾರಥಿ ಚುಟು ಆನಂದ ಹಾಗೂ ಸಾತವಾಹನರ ಅರಸರ ಕಾಲದ ಆಡಳಿತ ಕೇಂದ್ರವಾಗಿಯೂ ಇದು ಹೆಸರಾಗಿತ್ತು. ಮಯೂರವರ್ಮನಿಂದ ಪ್ರಾರಂಭವಾದ ಕದಂಬ ಅರಸು ಮನೆತನದ ಅತ್ಯಂತ ವೈಭವಯುತ ರಾಜಧಾನಿ ಬನವಾಸಿಯೇ ಆಗಿತ್ತು. ಇತ್ತೀಚೆಗೆ ಎಸ್. ಶೆಟ್ಟರ್ ಅವರು 'ಇಸಿಲ' ಪದದ ಬಳಕೆ ಕುರಿತ ಸುದೀರ್ಘ ಚರ್ಚೆಯನ್ನೇ ಮಾಡಿದ್ದು, ಇಸಿಲ ಕನ್ನಡ ಪದವಲ್ಲ. ಆದರೆ ಕುಪಣ(ಕೊಪ್ಪಳ) ಮತ್ತು ವನವಾಸಿಕ(ಬನವಾಸಿ) ಕನ್ನಡದ ಅತ್ಯಂತ ಪ್ರಾಚೀನ ಸ್ಥಳನಾಮಗಳು ಎಂಬುದನ್ನು ಸ್ಪಷ್ಟಪಡಿದ್ದಾರೆ. ಇದರಿಂದಾಗಿ ಬನವಾಸಿಯು ಕ್ರಿ.ಶ. 1-2ನೆಯ ಶತಮಾನದಲ್ಲಿ ಬಳಕೆಯಿದ್ದ ಪ್ರಾಚೀನ ಕನ್ನಡ ಹೆಸರೆಂಬುದು ಗಮನಾರ್ಹ. ಕದಂಬರು ಮೂಲತಃ ಬ್ರಾಹ್ಮಣರೆಂಬುದು ಇದುವರೆಗಿನ ಅಭಿಪ್ರಾಯವಾಗಿತ್ತು. ಆದರೆ ಇತ್ತೀಚೆಗೆ ಕದಂಬ ಎಂಬ ವೃಕ್ಷವು ಈಚಲುಮರವೆಂದೂ ಮತ್ತು ಈಚಲು ಮರದೊಂದಿಗೆ ಇಂದಿಗೂ ಅವಿನಾಭಾವ ಸಂಬಂಧವನ್ನು ಹೊಂದಿದ ಸ್ಥಳೀಯ ಸಮುದಾಯ ಎಂಬುದಾಗಿಯೂ ಅಭಿಪ್ರಾಯಿಸಲಾಗಿದೆ.
ಕೇಂದ್ರ: ಕರ್ನಾಟಕದ ಪ್ರಾಚೀನ ಬೌದ್ಧ ಕೇಂದ್ರಗಳಲ್ಲಿ ಬನವಾಸಿಯೂ ಒಂದು. ಇಲ್ಲಿ ಕೈಗೊಳ್ಳಲಾದ ಉತ್ಪನನದಲ್ಲಿ ಅನೇಕ ಬಗೆಯ ಬೌದ್ಧ ಆವಶೇಷಗಳು, ಕಟ್ಟಡಗಳು ಕಂಡುಬಂದಿವೆ ಕಂಚಿ ಮನೆ, ಉಮಿ ಗುಡ್ಡ, ಕಾಗೆ ಗುಡ್ಡ, ದೋಣಿ ಗುಡ್ಡ ಎಂದು ಸ್ಥಳೀಯವಾಗಿ ಕರೆಯುವ ಸ್ಥಳಗಳಲ್ಲಿ ಇಟ್ಟಿಗೆಯ ಅರ್ಧವೃತ್ತಾಕಾರದ ಕಟ್ಟಡ ಮತ್ತು ಚುಟುಕುಲಾನಂದ, ಮುಲಾನಂದರ ಸೀಸದ ನಾಣ್ಯ, ಮಡಕೆ ಮತ್ತಿತರ ಆವಶೇಷಗಳು ಬೆಳಕಿಗೆ ಬಂದಿದೆ. ಅಲ್ಲದೆ ಯಕ್ಷ, ಯಕ್ಷಿ, ವಿಷ್ಣು, ನರಸಿಂಹ, ಕಾರ್ತಿಕೇಯ, ತೀರ್ಥಂಕರ, ನಿಷದಿ ಕಲ್ಲು ಶಿಲ್ಪಗಳು ಬನವಾಸಿಯ ಧಾರ್ಮಿಕ ಸಂಗತಿಗಳೇ ಆಗಿವೆ. ಶಿವಸಿರಿ ಪುಳುಮಾವಿಯ ಪತ್ನಿ ಮಹಾದೇವಿಯ ಸ್ಮಾರಕ ಶಿಲಾಶಾಸನವೂ ಇಲ್ಲಿ ದೊರೆತಿದೆ. ಚುಟುಕುಲದ ವಿಣ್ಣುಕಡ ಚುಟುಕುಲಾನಂದನ ಮಗಳಾದ ಶಿವಸ್ಕಂದ ನಾಗಶ್ರೀ ಹಾಕಿಸಿದ ನಾಗಪ್ರತಿಮೆ ಶಾಸನವು ಪ್ರಮುಖವಾದದ್ದಾಗಿದೆ. ಕರ್ನಾಟಕದ ಮಟ್ಟಿಗೆ ವಿಹಾರ, ಕೆರೆ ಮತ್ತು ನಾಗಪ್ರತಿಮೆ ಮಾಡಿಸಿ ದಾನನೀಡಿದ ಪ್ರಾಚೀನ ಮಹಿಳೆ ಶಿವಸ್ಕಂದ ನಾಗಶ್ರೀ ಆಗಿರುವುದು ಗಮನಾರ್ಹ ಅಂಶ, ಪ್ರಾಕೃತ ಭಾಷೆ ಮತ್ತು ಬ್ರಾಹ್ಮಿ ಲಿಪಿಯಲ್ಲಿರುವ ಪ್ರಾಚೀನ ಶಾಸನಗಳಿವು, ಬನವಾಸಿಯು ವಿವಿಧ ಧರ್ಮಗಳ ನೆಲೆವೀಡೇ ಸರಿ. ಕ್ರಿ.ಪೂ. 3ನೆಯ ಶತಮಾನದಿಂದ ಕ್ರಿ.ಶ. 3ನೆಯ ಶತಮಾನದವರೆಗೆ ಬೌದ್ಧಧರ್ಮದ ನೆಲೆಯಾಗಿ, ಕದಂಬರ ಕಾಲದಲ್ಲಿ ಶೈವ ಮತ್ತು ವೈಷ್ಣವ ಧರ್ಮಗಳ ತಾಣವಾಗಿ, ನಂತರ ಕಾಲದಲ್ಲಿ ಜೈನರ ಕೇಂದ್ರವಾಗಿಯೂ ಕಾರ್ಯ ನಿರ್ವಹಿಸಿದೆ. ಚುಟು, ಶಾತವಾಹನ, ಕದಂಬರಿಂದ ಹಿಡಿದು ಮಧ್ಯಯುಗೀನ ಅವಧಿಯವರೆಗೆ ಬನವಾಸಿಯು ರಾಜಧಾನಿಯಾಗಿ ಮೆರೆದ ತಾಣ, ನಂತರದ ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ವಿಜಯನಗರ ಅರಸರ ಕಾಲದಲ್ಲಿ ಬನವಾಸಿ ಪನ್ನಿರ್ಚ್ಛಾಸಿರ ಅಥವಾ ಬನವಾಸಿ-12000 ಎಂಬುದಾಗಿಯೂ, ಕದಂಬ ಶಾಖೆಯಾದ ಹಾನಗಲ್ಲು ಕದಂಬರ ಆಡಳಿತದ ಕೇಂದ್ರವೂ ಆಗಿದ್ದಿತು.
ಬನವಾಸಿಯ ಕೋಟೆಯ ಬಹಳ ಪ್ರಾಚೀನವಾದುದೇ ಆಗಿದೆ. ಇದು ಚುಟು ಅರಸರ ಕಾಲದಲ್ಲಿ ಕಟ್ಟಲಾದ ಇಟ್ಟಿಗೆಯ ಕೋಟೆಯಾಗಿತ್ತೆಂಬುದು ಅ. ಸುಂದರ ಅಭಿಪ್ರಾಯ, ಬಾದಾಮಿ ಚಾಲುಕ್ಯ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲೂ ಈ ಕೋಟೆಯ ಉಲ್ಲೇಖವಿರುವುದು ಗಮನೀಯ, ಮಧುಕೇಶ್ವರ ದೇವಾಲಯ ಬನವಾಸಿಯು ಅತ್ಯಂತ ಪ್ರಸಿದ್ಧ ಐತಿಹಾಸಿಕ ಮತ್ತು ಪ್ರವಾಸಿ ತಾಣವೆಂದರೆ ಅದು ಈ ಮಧುಕೇಶ್ವರ ದೇವಾಲಯವೇ ಆಗಿದೆ. ಕದಂಬರಿಂದ ಹಿಡಿದು ಸೌದಿ ಅರಸರವರೆಗಿನ ಅನೇಕ ವಿಭಿನ್ನ ರಚನೆಗಳನ್ನು ಈ ದೇವಾಲಯದಲ್ಲಿ ಕಾಣುತ್ತೇವೆ. ಸೋದೆ ಅರಸರು ನಿರ್ಮಿಸಿದ ಅತ್ಯಂತ ಸೂಕ್ಷ್ಮ ಕೆತ್ತನೆಯುಳ್ಳ ಶಿಲಾಮಂಟಪ(ಮಂದಾಸನ)ವು ವಿಶಿಷ್ಟ ಬಗೆಯದ್ದು, ಈ ದೇವಾಲಯ ಆವರಣದಲ್ಲಿ ನರಸಿಂಹ, ಗಣೇಶ, ಪಾರ್ವತಿ, ಅಮೃತೇಶ್ವರ, ಶ್ರೀಕಂಠೇಶ್ವರ, ಅಲ್ಲಮಪ್ರಭು, ಸದಾಶಿವ ಮೊದಲಾದವು ಕಾಲಾನಂತರದ ಸೇರ್ಪಡಗಳೇ ಆಗಿವೆ.
ಕರ್ನಾಟಕದ ಪ್ರಾಚೀನ ಮತ್ತು ಪ್ರಸಿದ್ಧ ಪಟ್ಟಣಗಳಲ್ಲಿ ಆಯ್ಯಾವೊಳೆ ಅಥವಾ ಐಹೊಳೆಯು ಪ್ರಮುಖವಾದದ್ದು. ಮಲಪ್ರಭಾ ನದಿಯ ಬಲದಂಡೆಯ ಮೇಲಿರುವ ಐಹೊಳೆಯು ಬಾದಾಮಿ ಚಾಲುಕ್ಯರ ಕಾಲದ ಪ್ರಸಿದ್ಧ ಧಾರ್ಮಿಕ ಮತ್ತು ಸಾಂಸ್ಕೃತಿಕ ನಗರಿ. ಇದನ್ನು ಆರ್ಯಪುರ, ಮಹಾಕಾಶಿ, ಅಯ್ಯಾವೊಳಲು, ಅಯ್ಯವೊಳೆ, ಅಯ್ಯಾವೊಳೆ, ಐಹೊಳೆ ಮುಂತಾಗಿ ಕರೆಯಲಾಗಿದೆ. ಇದು ಬಾದಾಮಿ ಚಾಲುಕ್ಯರ ಕಾಲದಿಂದ ಕಲ್ಯಾಣ ಚಾಲುಕ್ಯರ ಅವಧಿಯವರೆಗೆ ಪ್ರವರ್ಧಮಾನವಾಗಿ ಮೆರೆದ ಪ್ರಾಚೀನ ಮಹಾಪಟ್ಟಣವೇ ಆಗಿತ್ತು. ಐಹೊಳೆಯು ಚಾರಿತ್ರಿಕವಾಗಿ ಮಹಾಪಟ್ಟಣವೇನೋ ಸರಿ, ಇದು ಪ್ರಾಗಿತಿಹಾಸ ಕಾಲದಿಂದಲೂ ಮಾನವನ ವಸತಿಯ ತಾಣವಾಗಿತ್ತು. ಇಲ್ಲಿನ ಗುಡ್ಡದ ಮೇಲಿರುವ ಶಿಲಾಯುಗದ ಬೃಹತ್ ಸಮಾಧಿಗಳು ಪ್ರಾಚೀನತೆಯನ್ನು ಕ್ರಿ.ಪೂ. 1000 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿವೆ.
ಐಹೊಳೆಯು ಸರ್ವಧರ್ಮಗಳ ಸಮನ್ವಯದ ನೆಲೆ. ಇಲ್ಲಿ ವೈದಿಕ, ಜೈನ, ಬೌದ್ಧ ಧರ್ಮದ ಅನೇಕ ಸ್ಮಾರಕ, ದೇಗುಲಗಳಿವೆ. ಇದು ಮುಖ್ಯವಾಗಿ ಮಧ್ಯಕಾಲದ ಬಹುದೊಡ್ಡ ವ್ಯಾಪಾರ ಕೇಂದ್ರವೂ ಆಗಿತ್ತು. ಅನೇಕ ಶಾಸನಗಳಲ್ಲಿ ಈ ಸ್ಥಳದ ವ್ಯಾಪಾರಿಗಳು ಮತ್ತು ವ್ಯಾಪಾರಿ ಸಂಘಗಳ ಉಲ್ಲೇಖಗಳಿವೆ. ಅವುಗಳಲ್ಲಿ ಅಯ್ಯಾವೊಳೆ ಆಯೋರ್ವರು ಎಂಬುದು ಕರ್ನಾಟಕದ ಅತ್ಯಂತ ಪ್ರಸಿದ್ಧ ವ್ಯಾಪಾರಿ ಸಂಘವಾಗಿದೆ. ಇದರ ಮೂಲಸ್ಥಾನ ಐಹೊಳೆಯೇ ಆಗಿದ್ದುದು ಗಮನಾರ್ಹ, ಇದು ಕರ್ನಾಟಕದ ಮಟ್ಟಿಗೆ ಏಕೆ ಭಾರತದಲ್ಲೇ ಅತ್ಯಂತ ಪ್ರಾಚೀನ ಮತ್ತು ಪ್ರಮುಖ ವ್ಯಾಪಾರಿ ಸಂಘಟನೆಗಳಲ್ಲಿ ಒಂದಾಗಿದೆ. ವ್ಯಾಪಾರ ವಸ್ತುಗಳಿಗೆ ಅನುಗುಣವಾಗಿ ಇತರೆ ಸಂಘಟನೆಗಳನ್ನು ಶಾಸನಗಳಲ್ಲಿ ಕಾಣುತ್ತೇವೆ. ಅವುಗಳಲ್ಲಿ ಸೆಟ್ಟಿಗುತ್ತರು, ಮುಮ್ಮರಿದಂಡರು, ಗವರಿಗ, ಗಾತ್ರಿಗ, ವೀರಬಣಂಜು ಇತ್ಯಾದಿ ಮುಖ್ಯ ಸಂಘಗಳಾಗಿವೆ. ಅಯ್ಯಾವೊಳೆ ಐನೂರ್ವರ ಸಂಘವು ಇವೆಲ್ಲವುಗಳಿಗಿಂತ ಹಳೆಯದು, ಇದರ ಉಲ್ಲೇಖ ಕ್ರಿ.7-8ನೇ ಶತಮಾನದಷ್ಟು ಪ್ರಾಚೀನ ಕ್ರಿತ. 7 ರಿಂದ 17ನೆಯ ಶತಮಾನದವರೆಗೂ ಈ ವ್ಯಾಪಾರಿ ಸಂಘದ ಅಸ್ತಿತ್ವವಿದ್ದುದನ್ನು ಶಾಸನಗಳು ದೃಢಪಡಿಸುತ್ತವೆ. ಇದರಿಂದ ಐಹೊಳೆಯು ಬಾದಾಮಿ ಚಾಲುಕ್ಯರ ಕಾಲದಲ್ಲಿ ಬಹುದೊಡ್ಡ ವ್ಯಾಪಾರ ಕೇಂದ್ರವಾಗಿತ್ತು. ಅಲ್ಲದೆ ಈ ವ್ಯಾಪಾರಿ ಸಂಘವು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇದು ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರಗಳಲ್ಲೂ ತನ್ನ ಪ್ರಭಾವವನ್ನು ಬೀರಿದ್ದುದು ಅಲ್ಲಿನ ಶಾಸನಗಳಿಂದ ಸ್ಪಷ್ಟವಾಗುತ್ತದೆ. ಅಲ್ಲದೆ ವಿದೇಶಗಳಿಗೂ ಇವರ ವ್ಯಾಪಾರ ವ್ಯವಹಾರ ವಿಸ್ತರಿಸಿದ್ದಿತು. ಇವರನ್ನು ಉಲ್ಲೇಖಿಸುವ ಶಾಸನಗಳು ಜಾವಾ, ಸುಮಾತ್ರ, ಥಾಯ್ಲೆಂಡ್, ಮಯನ್ಮಾರ್, ಶ್ರೀಲಂಕಾಗಳಲ್ಲೂ ಕಂಡುಬಂದಿವೆ. ಈ ಸಂಘದ ವ್ಯಾಪಾರದ ವಿಸ್ತಾರ, ಪಾತ್ರ ಮತ್ತು ಮಹತ್ವಗಳು ವಿದೇಶಗಳಿಗೂ ಹರಡಿತ್ತೆಂಬುದಂತೂ ಸ್ಪಷ್ಟ ಈ ಸಂಘದ ಬಿಕರಿಯ ವಸ್ತುಗಳು ಒಂದೆರಡಲ್ಲ, ಸೈನ್ಯಕ್ಕೆ ಅಗತ್ಯವಾದ ಆನೆ, ಕುದುರೆಗಳಿಂದ ವಜ್ರವೈಡೂರ್ಯಗಳವರೆಗೆ ದಿನಸಿ, ಸಾಂಬಾರುಗಳಿಂದ ಹಿಡಿದು ಸುಗಂಧ ದ್ರವ್ಯಗಳವರೆಗೆ, ಚಿಲ್ಲರೆ ವ್ಯಾಪಾರದಿಂದ ಸಗಟು ವ್ಯಾಪಾರದವರೆಗೆ ತನ್ನ ವಾಣಿಜ್ಯ ವ್ಯವಹಾರದ ಕಬಂಧ ಬಾಹುವನ್ನು ವಿಸ್ತರಿಸಿಕೊಂಡಿತ್ತು. ಈ ಸಂಘವು ತನ್ನ ಚಟುವಟಿಕೆ ವಿಸ್ತರಿಸಲು ಮತ್ತು ಸಾಮಾನು ಸರಂಜಾಮುಗಳ ಸಾಗಾಟಕ್ಕೆ, ಕುದುರೆ, ಕತ್ತೆ, ಕೋಣ ಮತ್ತು ಎತ್ತುಗಳನ್ನು ವಿಶೇಷವಾಗಿ ಬಳಸಿಕೊಂಡಿದ್ದಿತು. ಅಲ್ಲದೆ ವ್ಯಾಪಾರ-ವ್ಯವಹಾರವ ಕಳ್ಳಕಾಕರ ಭಯವಿಲ್ಲದೆ ಸುಲಲಿತವಾಗಿ ಸಾಗಿಸಲು ಪ್ರತ್ಯೇಕ ರಕ್ಷಣಾ ವ್ಯವಸ್ಥೆಯನ್ನೂ ಹೊಂದಿದ್ದರು. ಆದ್ದರಿಂದಲೇ ವ್ಯಾಪಾರಿಗಳನ್ನು ವೀರಬಣಂಜುಗಳೆಂದೂ ಕರೆಯಲಾಗಿದೆ. ಈ ಸಂಘಟನೆಯು ಐಹೊಳೆಯಲ್ಲದೆ ನಾಡಿನ ವಿವಿಧ ಕಟ್ಟಿದ ದೇವಾಲಯಗಳು ನೀಡಿದ ದಾನದತ್ತಿಗಳು ಸಾವಿರಾರು, ಅಲ್ಲದೆ ನೂರಾರು ಕೆರೆ, ಕಟ್ಟೆ, ಬಾವಿಗಳನ್ನು ನಿರ್ಮಿಸಿ ಜನೋಪಯೋಗಿ ಕಾರ್ಯಗಳನ್ನೂ ಅವರು ಕೈಗೊಂಡಿದ್ದರು. ಇದು ಅಯ್ಯಾವೊಳೆ ಐನೂರ್ವರು ಸಂಘದ ವ್ಯಾಪಾರ-ವ್ಯವಹಾರದ ಬಲಿಷ್ಟತೆಯಲ್ಲದೆ ಮತ್ತೇನು ?
ಐಹೊಳೆ ಶಾಸನ: ಮೇಗುತಿ ಜಿನಾಲಯದ ಶಾಸನವು ಇಮ್ಮಡಿ ಮಲಕೇತಿಯ ಜೀವನ ಮತ್ತು ಸಾಧನೆಗಳನ್ನು ಸಾರುವ ಮಹತ್ವದ ಶಾಸನ, ಇದರ ವಿಶೇಷತೆಯೆಂದರೆ ಮಹಾಭಾರತ ಯುದ್ಧದ ವರ್ಷದ ಉಲ್ಲೇಖ, ಶಾಸನ ಕವಿ ರವಿಕೀರ್ತಿಯು ತನ್ನನ್ನು ಕಾಳಿದಾಸ ಭಾರವಿಯರಿಗೆ ಹೋಲಿಸಿಕೊಂಡದ್ದು ಮತ್ತು ಜನೇಂದ್ರಾಲಯ ಸ್ಥಾಪನೆಯೇ ಆಗಿದೆ. ಇವುಗಳಲ್ಲದೆ ಇಮ್ಮಡಿ ಪುಲಕೇಶಿಯ ವಂಶಾವಳಿ ಮತ್ತು ಅವನು ಅಪ್ಪಾಯಿಕ, ಗೋವಿಂದ, ಬನವಾಸಿ, ಗಂಗ, ಲಾಟ, ಮಾಳವ, ಗುರ್ಜ್ಜರ, ಮಹಾರಾಷ್ಟ್ರಕ, ಕಳಿಂಗ, ಪಿಷ್ಟಪುರ, ಕಂಚಿ, ಕೇರಳ, ಪಾಂಡ್ಯರ ಮೇಲೆ ಸಾಧಿಸಿದ ವಿಜಯಗಳ ಸರಮಾಲೆಯನ್ನೇ ಈ ಶಾಸನ ಹೊಂದಿರುವುದು ಗಮನಾರ್ಹ.
ಪ್ರಾಚೀನ ಕೋಟೆ: ಐಹೊಳೆಯಲ್ಲಿ ಬಾದಾಮಿ ಚಾಲುಕ್ಯರ ಕಾಲದಲ್ಲಿಯೇ ಕಟ್ಟಲಾದ ಪ್ರಾಚೀನ ಕೋಟೆಯಿತ್ತು. ಇದು ಸ್ಥಳೀಯವಾಗಿ ಸಿಗುವ ಕೆಂಪು ಮರಳುಗಲ್ಲಿನಿಂದ ಕ್ರಿಶ. 1-7ನೆಯ ಶತಮಾನದಲ್ಲೇ ಕಟ್ಟಲಾದ ಕೋಟೆಯೆಂಬುದು ಶಾಸನಗಳಿಂದ ತಿಳಿಯುವುದು. ಈ ಕೋಟೆಯು ಸುಂದರವಾಗಿ, ವಿಸ್ತಾರವಾಗಿ ಹರಡಿದ್ದು, ಆನೇಕ ತೆನೆಗಳಿಂದ ಕೂಡಿದ್ದಿತು. ಈ ತೆನೆಗಳನ್ನು ಕಟ್ಟಿಸಿದುದಲ್ಲದೆ ಅವುಗಳನ್ನು ಕಟ್ಟಿಸಿದವರ ಹೆಸರುಗಳನ್ನೂ ನಮೂದಿಸಿರುವುದು ಗಮನೀಯ ಸಂಗತಿ, ಅವುಗಳಲ್ಲಿ ಬೆಣ್ಣೆಯ ಸೆಟ್ಟಿ ಈಶ್ವರ ಸೆಟ್ಟಿಯ ತೆನೆ, ಕಹಿ ಶೆಟ್ಟಿಯ ತೆನೆ, ಮರಳಿ ಸೆಟ್ಟಿಯ ತೆನೆ, ಕಪ್ಪರ ದೇಚಿಸೆಟ್ಟಿ ತೆನೆ, ಮಂಡಸೆಟ್ಟ ತೆನೆ, ಬಚರ ತೆನೆ, ಅಂಗಡಿಯ ತನೆ, ಸಿಂಗೀಶ್ವರ ದೇವರ ತೆಂಕದವಾಗಿಲಂಗಡಿಯ ತೆನೆಗಳೆಂದೇ ಕರೆದಿರುವುದನ್ನು ಎ.ಎಂ. ಅಣ್ಣಿಗೇರಿಯವರು ಗುರುತಿಸಿದ್ದಾರೆ. ಇದರಿಂದ ಅಯ್ಯಾವೊಳೆ ಐನೂರ್ವರು ಮತ್ತು ಅಲ್ಲಿನ ಸೆಟ್ಟಿಯೆಂಬ ವ್ಯಾಪಾರಿ ಸಮುದಾಯವು ಐಹೊಳೆ ಕೋಟೆ ನಿರ್ಮಾಣದಲ್ಲಿ ವಹಿಸಿದ್ದ ಪಾತ್ರ ಮಹತ್ವದ್ದೆನಿಸುತ್ತದೆ. ಒಟ್ಟಿನಲ್ಲಿ ಐಹೊಳೆಯು ಕರ್ನಾಟಕದ ಪ್ರಾಚೀನ ಪಟ್ಟಣವಾಗಿ, ವಾಣಿಜ್ಯ ಕೇಂದ್ರವಾಗಿ, ದೇವಾಲಯಗಳ ಆಗರವಾಗಿ, ಸಾಂಸ್ಕೃತಿಕ ಕುರುಹುಗಳನ್ನು ಮೈದಳೆದುಕೊಂಡು ಇಂದಿಗೂ ಜೀವಂತಿಕೆಯನ್ನು ಹೊಂದಿರುವ ಚಾರಿತ್ರಿಕ ಸ್ಥಳವೆಂದರೆ ಅತಿಶಯೋಕ್ತಿ ಆಗಲಾರದು.
ಒಟ್ಟಾರೆಯಾಗಿ ಹೇಳುವುದಾದರೆ ಬಸವಣ್ಣ ಮತ್ತು ಆತನ ಧರ್ಮ ಲೋಕ ಪ್ರಸಿದ್ಧಿ ಪಡೆಯುವುದರ ಜೊತೆಗೆ ಲೋಕ ಕಲ್ಯಾಣಕ್ಕೆ ಇವರು ಪ್ರತಿಪಾದಿಸಿದ ತತ್ವಗಳು ಇಂದಿಗೂ ಮನ್ನಣೆ ಪಡೆದಿರುವುದು ವಿಶೇಷ ಸಂಗತಿಯಾಗಿದೆ ಎಂದು ಹೇಳಬಹುದು