Photo by Pavan Kumaar on Unsplash

ದೊಂದು ಮಿಲಿಯನ್ ಡಾಲರ್ ಪ್ರಶ್ನೆ. ಹಂಪೆಯ ಪ್ರಸಿದ್ಧ ವಿಠ್ಠಲ ದೇವಾಲಯದ ಆವರಣದಲ್ಲಿರುವ ಕಲ್ಲಿನ ರಥ ಮೇಲಿದ್ದ ಗೋಪುರವನ್ನು ಬೀಳಿಸಿದವರು ಯಾರು? ಐತಿಹಾಸಿಕ ಕಲಾಕೃತಿಗಳ ಕುರಿತು ನಮ್ಮ ಜನಸಾಮಾನ್ಯರಲ್ಲಿ ಒಂದು ನಂಬಿಕೆಯಿದೆ - ನಮ್ಮ ನಾಡಿನ ಅಪರೂಪದ ಸಾಂಸ್ಕೃತಿಕ ತಾಣಗಳನ್ನು, ವಾಸ್ತುಕೃತಿಗಳನ್ನು, ಶಿಲ್ಪಗಳನ್ನು ಮಧ್ಯಯುಗೀಯ ದಾಳಿಕೋರರಾದ ಖಿಲ್ಜಿ, ತುಘಲಕ್, ಬಹಮನಿ ಮೊದಲಾದವರ ಸೈನ್ಯವು ನಾಶ ಪಡಿಸಿತು ಎಂದು. ಈ ನಂಬಿಕೆಗೆ ಹಲವು ಸಂದರ್ಭಗಳಲ್ಲಿ ಐತಿಹಾಸಿಕ ಆಧಾರಗಳೂ ಇವೆ. 1565ರಲ್ಲಿ ನಡೆದ ತಾಳಿಕೋಟೆ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸೋಲಿಸಿದವರು ಬಹಮನಿ ಸುಲ್ತಾನರು ಮತ್ತು ಅವರ ಸೈನ್ಯ ಎಂಬುದಕ್ಕೆ ಸ್ಪಷ್ಟವಾದ ದಾಖಲೆಗಳಿವೆ. ಆ ಯುದ್ಧದಲ್ಲಿ ಸೋತ ಜಯನಗರ ಅರಸರು, ಹಂಪೆಯನ್ನು ತೊರೆದು ಪೆನುಗೊಂಡೆಯತ್ತ ಸಾಗಿದ್ದರಿಂದ, ಹಂಪೆಯನ್ನು ಹಲವು ತಿಂಗಳುಗಳ ಕಾಲ ಲೂಟಿ ಮಾಡಿ, ವಿನಾಶಕ್ಕೆ ಗುರಿಮಾಡಲಾಯಿತು ಮತ್ತು ಅಲ್ಲಿನ ಸಂಪತ್ತನ್ನು ದೋಚಲಾಯಿತು ಎಂಬುದನ್ನು ಸಹ ವಿವಿಧ ಇತಿಹಾಸಕಾರು ದಾಖಲಿಸಿದ್ದಾರೆ.

ಆದರೆ, ಹಂಪೆಯ ಅಪರೂಪದ ಕಲ್ಲಿನ ರಥದ ಮೇಲಿದ್ದ ಸುಂದರ, ವಿಶಿಷ್ಟ ಗೋಪುರವನ್ನು ಯಾರು ಕೆಡವಿದರು ಎಂಬುದನ್ನು ಸ್ಪಷ್ಟವಾಗಿ ಯಾರೂ ಹೇಳುತ್ತಿಲ್ಲ. ಅಕಸ್ಮಾತ್ ಅಂತಹ ದಾಖಲೆಗಳು ಎಲ್ಲಾದರೂ ಇದ್ದರೂ, ಅದನ್ನು ನಿಮ್ಮಂತಹ, ನನ್ನಂತಹ ಜನಸಾಮಾನ್ಯರಿಗೆ ತಿಳಿಸುವ ಕೆಲಸವೂ ಆಗಿಲ್ಲ. ಆದ್ದರಿಂದ, ಮೊನ್ನೆ ಮೊನ್ನೆ ತನಕವೂ, ಹಂಪೆಯ ಕಲ್ಲಿನ ರಥದ ಗೋಪುರವನ್ನು 1565ರಲ್ಲಿ ಬಹಮನಿ ಸುಲ್ತಾನದ ಸೈನಿಕರೇ ಬೀಳಿಸಿರಬಹುದೆಂಬ ಅಸ್ಪಷ್ಟ ತಿಳಿವಳಿಕೆಯಲ್ಲಿದ್ದೆವು.

ಇಲ್ಲಿ ಇನ್ನೊಂದು ದಿಗ್ಭ್ರಮೆ ಹುಟ್ಟಿಸುವ ವಾಸ್ತವ ಸಂಗತಿಯೊಂದಿದೆ. ಅದನ್ನು ಸಣ್ಣ ಮಟ್ಟಿಗಿನ ಸಾಂಸ್ಕೃತಿಕ ದುರಂತವೆಂದರೂ ತಪ್ಪಿಲ್ಲ. ಅಸಲಿಗೆ, ಹಂಪೆಯ ಆ ಸುಂದರ, ಜಗತ್‍ಪ್ರಸಿದ್ಧ ಕಲ್ಲಿನ ರಥಕ್ಕೆ ಒಂದು ಗೋಪುರವಿತ್ತು ಎಂಬ ವಿಚಾರ ಜನಸಾಮಾನ್ಯರಿಗೆ ಗೊತ್ತಾಗುತ್ತದೆ ಇತ್ತೀಚೆಗೆ. ಈಗಲೂ ಹೆಚ್ಚಿನವರಿಗೆ ಅದರ ತಿಳಿವಳಿಕೆ ಇಲ್ಲ. ಏಕೆಂದರೆ, ಪಠ್ಯಪುಸ್ತಕಗಳಲ್ಲಿ, ಪ್ರವಾಸಿ ಮಾರ್ಗದಶಿಗಳಲ್ಲಿ ಹಂಪೆಯನ್ನು ವಿವರಸುವಾಗ, ಗೋಪುರವಿಲ್ಲದ ಕಲ್ಲಿನ ರಥದ ಚಿತ್ರವನ್ನು ಮುದ್ರಿಸುವ ಪರಿಪಾಠವಿದೆ. ಅದನ್ನು ತೀರಾ ತಪ್ಪು ಎಂದೂ ಹೇಳಲಾಗದು. ಆದರೆ ತಪ್ಪು ಯಾವುದೆಂದರೆ, ಪಠ್ಯ ಪುಸ್ತಕಗಳಲ್ಲೇ ಆಗಲಿ ಎಲ್ಲೇ ಆಗಲಿ, ಕಲ್ಲಿನ ರಥದ ಪೋಟೋ ಮುದ್ರಿಸಿದಾಗ, ಇದರ ಮೇಲೊಂದು ಇಟ್ಟಿಗೆ ಮತ್ತು ಗಾರೆಯ ಸುಂದರ ಗೋಪುರವಿತ್ತು. ಈಗ ಅದು ನಾಶವಾಗಿದೆ' ಎಂದು ತಿಳಿಸಬೇಕಿತ್ತು. ಹಂಪೆಗೆ ಭೇಟಿಕೊಟ್ಟವರು, ಆ ಕಲ್ಲಿನ ರಥವನ್ನು ಕಂಡು, ಅದರ ಚಿತ್ರಗಳನ್ನು ಕಂಡು ಮಂತ್ರಮುಗ್ಧರಾಗುವರೇ ಹೊರತು, ಅದರ ಮೇಲಿದ್ದ ಗೋಪುರ ಎಲ್ಲಿ ಕಣ್ಮರೆಯಾಯಿತು ಎಂದು ಪ್ರಶ್ನೆ ಕೇಳುವುದಿಲ್ಲ! ಆ ವಿಚಾರ ಗೊತ್ತಿದ್ದರೆ ತಾನೆ ಪ್ರಶ್ನೆ ಕೇಳುವುದು? ಹಂಪೆಯ ಇತರ ನೂರಾರು ಕಲಾಕೃತಿಗಳನ್ನು ನೋಡುವ ವೀಕ್ಷಕರು, ಅದರ ಜತೆಯಲ್ಲೇ ಈ ಅಭೂತಪೂರ್ವ ಕಲ್ಲಿನ ರಥವನ್ನು ನೋಡುತ್ತಾರೇ ಹೊರತು, ಅದಕ್ಕೊಂದು ಗೋಪುರವಿತ್ತು ಎಂದು ತರ್ಕಿಸಲು ಸಹಾ ಹೋಗುವುದಿಲ್ಲ. ಬಾಲ್ಯದಿಂದಲೂ ನಾವು ಕಂಡ ಪಠ್ಯಪುಸ್ತಕಗಳಲ್ಲಿ ಬೋಳು ಬೋಳು ಕಲ್ಲಿನ ರಥವೇ ಮುದ್ರಣಗೊಂಡಿತ್ತೇ ಹೊರತು, ಅದರ ಮೇಲೊಂದು ಗೋಪುರ ಈ ಹಿಂದೆ ಇತ್ತು ಎಂಬ ಒಂದು ಸಾಲನ್ನು ಸೇರಿಸಲು ನಮ್ಮ ಪಠ್ಯಪುಸ್ತಕ ಸಮಿತಿ ಮರೆತುಬಿಟ್ಟಿದೆ. ಅದನ್ನೇ ಓದುತ್ತಾ ಬಂದ ಮಕ್ಕಳು, ನೀವು, ನಾವು ಎಲ್ಲರೂ ಸಹ, ಶಿಲಾ ರಥ ಎಂದರೆ ಗೋಪುರವಿಲ್ಲದ ಕಲ್ಲಿನ ಕಲಾಕೃತಿ ಎಂದೇ ನಂಬಿಕೊಂಡು ಬಂದೆವು. ಸರಕಾರವು ಐವತ್ತು ರುಪಾಯಿ ನೋಟಿನ ಮೇಲೆ ಈ ಕಲ್ಲಿನ ರಥದ ಚಿತ್ರವನ್ನು ಮುದ್ರಿಸಿದಾಗ, ನಾವೆಲ್ಲಾ ಹೆಮ್ಮೆಪಟ್ಟೆವು ನೋಡಿ, ನಮ್ಮ ಪರಂಪರೆಯ ಶಿಲ್ಪಕಲಾಕೃತಿಯೊಂದನ್ನು ಸರಕಾರದವರು, ಕೃಪೆತೋರಿ ನೋಟಿನ ಮೇಲೆ ಮುದ್ರಿಸಿದ್ದಾರೆ, ಆ ಮೂಲಕ ಕಲ್ಲಿನ ರಥಕ್ಕೆ ಪ್ರಚಾರ ದೊರೆತಿದೆ' ಎಂದು ಧನ್ಯರಾದೆವೇ ಹೊರತು, ಅದರ ಮೇಲಿದ್ದ ಆ ಸುಂದರ ಗೋಪುರವನ್ನು ನೆನಪಿಸಿಕೊಳ್ಳಬೇಕಿತ್ತಲ್ಲವೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿರಲಿಲ್ಲ.

ಅಸಲಿಗೆ, ಆ ಕಲ್ಲಿನ ರಥದ ಮೇಲೆ ಒಂದು ಸುಂದರ ಗೋಪುರವು 1920ರ ದಶಕದ ತನಕ ಇತ್ತು ಎಂಬ ವಿಚಾರವು ಜನಸಾಮಾನ್ಯರಲ್ಲಿ ಪ್ರಚಾರಕ್ಕೆ ಬಂದದ್ದು 1980ರ ದಶಕದಲ್ಲಿ ಯುರೋಪಿಯನ್ ಛಾಯಾಚಿತ್ರಗ್ರಾಹಕರು ತೆಗೆದ ಹಳೆಯ ಪೋಟೋಗಳನ್ನು ಪುಸ್ತಕದರೂಪದಲ್ಲಿ ಆಗ ಮುದ್ರಿಸಲಾಗಿತ್ತು. ಹಾಗೆಂದು ಆ ವಿಚಾರ ಒಂದು ರಹಸ್ಯವಾಗಿತ್ತೆ? ಇಲ್ಲ, ಖಂಡಿತಾ ಇಲ್ಲ. ನಮ್ಮ ಇತಿಹಾಸ ತಜ್ಞರಿಗೆ, ಪುರಾತತ್ವ ತಜ್ಞರಿಗೆ, ಪುರಾತತ್ವ ಇಲಾಖೆಗೆ ಈ ಗೋಪುರವಿದ್ದ ಸಂಪೂರ್ಣ ಮಾಹಿತಿ ಇತ್ತು. ಏಕೆಂದರೆ, 19ನೆಯ ಶತಮಾನದಲ್ಲಿ, ಹಂಪೆಯಲ್ಲಿ ಛಾಯಾಚಿತ್ರಣ ಮಾಡಲು ಬಂದಿ ಕೆಲವು ವಿದೇಶೀ ಛಾಯಾಚಿತ್ರಕಾರರ ಕ್ಯಾಮೆರಾದಲ್ಲಿ ಮತ್ತು ಪುರಾತತ್ವ ಇಲಾಖೆಯ ಛಾಯಾಚಿತ್ರಗಳಲ್ಲಿ ಈ ಗೋಪುರವು ಸ್ಪಷ್ಟವಾಗಿ ಸೆರೆಯಾಗಿತ್ತು. ಆ ಛಾಯಾಚಿತ್ರಗಳನ್ನು ಬ್ರಿಟಿಷ್ ಸರಕಾರದ ಇಲಾಖೆಗಳು ಸೂಕ್ತ ಸ್ಥಳಗಳಲ್ಲಿ, ಕೆಲವನ್ನು ಇಂಗ್ಲೆಂಡಿನಲ್ಲಿ ಭದ್ರವಾಗಿ ಕಾಪಿಟ್ಟಿದ್ದರು, ಅಷ್ಟೇ ಅಲ್ಲ ಅವುಗಳ ಅಧ್ಯಯನಕ್ಕೂ ಒಳಪಡಿಸಿದ್ದರು. ಆದರೆ, ಆ ಪ್ರಮುಖ ಮಾಹಿತಿಯನ್ನು ನಮ್ಮ ಜನಸಾಮಾನ್ಯರಿಂದ ಮುಚ್ಚಿಟ್ಟಿದ್ದರು. ಯಾಕೆ ಮುಚ್ಚಿಟ್ಟಿದ್ದರು, ಯಾಕೆ ಈ ಗೋಪುರದ ವಿವರವನ್ನು ನಮ್ಮ ಪಠ್ಯಗಳಲ್ಲಿ ಸೇರಿಸಿ, ನಮ್ಮ ಮಕ್ಕಳ ಜ್ಞಾನವನ್ನು ಅಭಿವೃದ್ಧಿ ಪಡಿಸಲಿಲ್ಲ ಎಂಬ ಪ್ರಶ್ನೆಗೆ ಉತರ ನೀಡುವವರಾರು?

1868ರಲ್ಲಿ ಹಂಪೆಯ ವಿಠ್ಠಲ ದೇಗುಲ ಸಂಕೀರ್ಣದ ಛಾಯಾಚಿತ್ರೀಕರಣ ನಡೆಸಿದ ಎಡ್ಮಂಡ್ ಡೇವಿಡ್ ಲೋಯ್ನ್ ಎಂಬಾತ ತೆಗೆದ ಚಿತ್ರಗಳಲ್ಲಿ, ಕಲ್ಲಿನ ರಥದ ಮೇಲೆ ಇಟ್ಟಿಗೆ ಮತ್ತು ಗಾರೆಯ ಸುಂದರ ಗೋಪುರವಿರುವುದು ಕಾಣಿಸುತ್ತದೆ. ಹಲವು ದಶಕಗಳ ನಿರ್ಲಕ್ಷ್ಯದಿಂದಾಗಿ, ವಿಠ್ಠಲ ದೇಗುಲದ ಮೇಲೆ ಮತ್ತು ಕಲ್ಲಿನ ರಥದ ಮೇಲೆ ಗಿಡಗಳು ಬೆಳೆದಿದ್ದುದು ಸಹ 1868ರ ಆ ಚಿತ್ರಗಳಲ್ಲಿ ಸ್ಪಷ್ಟವಾಗಿ ಮೂಡಿಬಂದಿದೆ. ಕಲ್ಲಿನ ರಥ ಇದ್ದ ಆವರಣದ ನೆಲದ ಮೇಲೆಲ್ಲಾ ಕುರುಚಲು ಗಿಡ, ಹುಲ್ಲು ಬೆಳೆದಿದ್ದು ಸಹ ಇದರಲ್ಲಿ ದಾಖಲಾಗಿದೆ. ಅಲೆಕ್ಸಂಡರ್ ಗ್ರೀನ್‍ಲಾ ಎಂಬ ಬ್ರಿಟಿಷ್ ಅಧಿಕಾರಿಯೂ ಇದೇ ಅವಧಿಯಲ್ಲಿ ಹಂಪೆಯ ಹಲವು ಪೋಟೋಗಳನ್ನು ತೆಗೆದಿದ್ದ.

1892ರ ಸಮಯದಲ್ಲಿ ಅಲೆಕ್ಸಾಂಡರ್ ರಿಯಾ ಎಂಬಾತ ತೆಗೆದ ಛಾಯಾಚಿತ್ರಗಳು ತುಂಬ ಕುತೂಹಲಕಾರಿ. ಆತ ತೆಗೆದ ಒಂದು ಚಿತ್ರದಲ್ಲಿ ವಿಠ್ಠಲ ದೇಗುಲದ ಸಂಕೀರ್ಣ ಮತ್ತು ಕಲ್ಲಿನ ರಥದ ಚಿತ್ರಗಳು ಸಷ್ಟವಾಗಿ ಮೂಡಿವೆ ಮತ್ತು ವಿಶೇಷವೆಂದರೆ, ಆ ಇಡೀ ಆವರಣ ಚೊಕ್ಕಟವಾಗಿದೆ! 1868ರ ಛಾಯಾಚಿತ್ರಗಳಲ್ಲಿ ಕಂಡಂತೆ ಕಲ್ಲಿನ ರಥದ ಗೋಪುರದ ಮೇಲಿದ್ದ ಬಳ್ಳಿ, ಗಿಡಗಳು ಈ ಚಿತ್ರದಲ್ಲಿಲ್ಲ. ಅಂದರೆ, ಬ್ರಿಟಿಷ್ ಸರಕಾರದ ಇಲಾಖೆಗಳು ಈ ಇಪ್ಪತ್ತು ವರ್ಷಗಳ ಅವಧಿಯಲ್ಲಿ, ಆ ಆವರಣವನ್ನು ಚೊಕ್ಕಟಗೊಳಿಸಿದ್ದಾರೆ. ಬ್ರಿಟಿಷರ ಸುಪರ್ದಿಗೆ ಒಳಪಟ್ಟನಂತರ, ಈ ಆವರಣ ಮತ್ತು ಹಂಪೆಯು ತಕ್ಕಮಟ್ಟಿಗಿನ ರಕ್ಷಣೆ ಪಡೆದಿರಲೇಬೇಕು. ಭಾರತದ ಅಪೂರ್ವ ವಾಸ್ತು ಸಂಪತ್ತನ್ನು ರಕ್ಷಿಸಿದ ಬ್ರಿಟಿಷರು, ತಮಗೆ ಬೇಕೆನಿಸಿದ ಅಮೂಲ್ಯ ಕಲಾಕೃತಿಗಳನ್ನು ಅಧಿಕೃತವಾಗಿ ಮತ್ತು ಅನಧಿಕೃತವಾಗಿ ತಮ್ಮ ದೇಶಕ್ಕೆ ಸಾಗಿಸಿದ ವಿಚಾರ ಅಲಾಯಿದ. ಸಾಧ್ಯವಾಗಿದ್ದರೆ, ಹಂಪೆಯ ಕಲ್ಲಿನ ರಥವನ್ನೂ ಇಡಿಯಾಗಿ ಅದರ ಗೋಪುರದ ಸಮೇತ ತಮ್ಮ ದೇಶಕ್ಕೆ ಸಾಗಿಸುತ್ತಿದ್ದರೇನೋ, ಆದರೆ ಅದು ಸಾಧ್ಯವಾಗಲಿಲ್ಲ. ಬಿಡಿ, ಆ ವಿಚಾರ ಬೇರೆ.

ಇಲ್ಲಿ ಗಮನಿಸುವಂತಹದ್ದೆಂದೆ, 1892ರ ಛಾಯಾಚಿತ್ರದಲ್ಲಿ ಹಂಪೆಯ ಕಲ್ಲಿನ ರಥದ ಮೇಲೆ ಗೋಪುರ ಸುಸ್ಥಿತಿಯಲ್ಲಿದ್ದುದು ಸ್ಪಷ್ಟವಾಗಿ ಮೂಡಿಬಂದಿದ್ದರಿಂದ, ಅದರ ಮೇಲೊಂದು ಗೋಪುರವಿದ್ದುದಂತೂ ಸ್ಪಷ್ಟ. ಹಂಪೆಯ ಕಲ್ಲಿನ ರಥವನ್ನು ಹೋಲುವ, ಅದೇ ಕಾಲಮಾನದಲ್ಲಿ ನಿರ್ಮಾಣಗೊಮಡ ತಾಡಪತ್ರಿಯಲ್ಲಿರುವ ಕಲ್ಲಿನ ರಥದ ಮೇಲೂ ಒಂದು ಕಲ್ಲಿನ ಗೋಪುರವಿದೆ, ದಿಗೂ ಉಳಿದಿಕೊಂಡು ಬಂದಿದೆ. ತಾಡಪತ್ರಿಯ ಚಿಂತಲ ವೆಂಕಟರಮಣ ದೇಗುಲದಲ್ಲಿರುವ ಈ ಶಿಲಾರಥವು ವಿಜಯನಗರದ ಅರಸ ಕೃಷ್ಣದೇವರಾಯನ ಅಧೀನದಲ್ಲಿದ್ದ ಎರಡನೆಯ ಪೆಮ್ಮಸಾನಿ ತಮ್ಮನಾಯ್ಡು ನಿರ್ಮಿಸಿದ್ದ. ಈಗಲೂ ಕಾಣಸಿಗುವ ಈ ಗೋಪುರಕ್ಕಿಂತಲೂ, ಅಂದಿನ ರಾಜಧಾನಿ ಹಂಪೆಯಲ್ಲಿದ್ದ ಕಲ್ಲಿನ ರಥದ ಮೇಲಿದ್ದ ಇಟ್ಟಿಗೆಯ ಗೋಪುರ ಇನ್ನಷ್ಟು ಸುಂದರವಾಗಿ, ವರ್ಣಮಯವಾಗಿದ್ದಿರಲೇಬೇಕು. ಹಾಗಿದ್ದ ಮೇಲೆ, ಆ ನಂತರದ ಕೆಲವು ದಶಕಗಳಲ್ಲಿ, ಆ ಗೋಪುರ ಕಣ್ಮರೆಯಾಗಿದೆ! ಏಕೆ? ಹೇಗೆ? ಅದೊಂದು ಆಕಸ್ಮಿಕವೇ, ವಿಶಪೂರ್ವಕವೇ, ನಿರ್ಲಕ್ಷವೇ ಅಥವಾ ದುರುಳರ ಕೃತ್ಯವೆ?

ಈ ಎಳೆಯನ್ನು ಹಿಡಿದು ಹೊರಟಾಗ, ನನ್ನ ಸೀಮಿತ ಹುಡುಕಾಟದಲ್ಲಿ ದಿಗ್ಭ್ರಮೆ ಹುಟ್ಟಿಸುವ ಕೆಲವು ಸಂಗತಿಗಳು ಗೊತ್ತಾದವು. ಪ್ರಮುಖ ವಿಚಾರವೆಂದರೆ, ಈ ಗೋಪುರವು ಇಟ್ಟಿಗೆ ಮತ್ತು ಗಾರೆಗಚ್ಚಿನದಾಗಿತ್ತು ಎಂದು ಇತಿಹಾಸಕಾರ ಷ.ಶೆಟ್ಟರ್ ಅವರು ಹೇಳಿದ್ದಾರೆ. ಆಂಗ್ಲ ಪತ್ರಿಕೆಯೊಂದರಲ್ಲಿ25.10.2014ರ ಸಂಚಿಕೆಯಲ್ಲಿ ಪ್ರಕಟವಾದಂತೆ, 'ಈ ರಥದ ಮೇಲೊಂದು ಗೋಪುರವಿತ್ತು, ಆದ್ದರಿಂದ ಇದು ಒಂದು ಆಲಯವಾಗಿತ್ತು. ಈ ಗೋಪುರವು 1940ರ ದಶಕದಲ್ಲಿ ನಾಶವಾಯಿತು' ಎಂದಿದ್ದಾರೆ ಡಾ. ಷ.ಶೆಟ್ಟರ್. ಜತೆಗೆ, ಈ ಕಲ್ಲಿನ ರಥವನ್ನು ಕುದುರೆಯನ್ನು ಎಳೆಯುವಂತೆ ಕಂಡರಿಸಲಾಗಿತ್ತು, ಆದರೆ, ಇಂದು ಅದರ ಮುಂದೆ ಎರಡು ಆನೆಯ ವಿಗ್ರಹಗಳನ್ನು ಜೋಡಿಸಲಾಗಿದ್ದು, ಅದು ತಪ್ಪು ಅಭಿಪ್ರಾಯ ಮೂಡಿಸುವಂತಾಗಿದೆ ಎಂದೂ ಅವರು ಹೇಳಿದ್ದಾರೆ.

ಒಂದಂತೂ ಸ್ಪಷ್ಟ. ತೀರಾ ಈಚೆಗೆ, ಅಂದರೆ 1920-40 ದಶಕದ ಅವಧಿಯಲ್ಲಿ ಹಂಪೆಯ ಕಲ್ಲಿನ ರಥದ ಮೇಲಿದ್ದ ಗಾರೆ ಗಚ್ಚಿನ ಗೋಪುರ ನಾಶವಾಗಿದೆ. ಅಂದರೆ, ಕೃಷ್ಣ ದೇವರಾಯನು ಕಳಿಂಗ ಯುದ್ಧವನ್ನು ಗೆದ್ದಾಗ, 1520ರ ದಶಕದಲ್ಲಿ ನಿರ್ಮಾಣಗೊಂಡ ಈ ಸುಂದರ ಕಲ್ಲಿನ ರಥದ ಮೇಲಿದ್ದ ಗೋಪುರವು, ನಂತರದ 500 ವರ್ಷಗಳ ಕಾಲ ಭದ್ರವಾಗಿ ಉಳಿದುಕೊಂಡಿತ್ತು. ಈಚಿನ ಕೆಲವು ದಶಕಗಳಲ್ಲಿ ಅದು ನಾಶಗೊಂಡಿದೆ ಅಂದರೆ, ಅದೊಂದು ದುರಂತವಲ್ಲವೆ? ಯಾವ ಬ್ರಿಟಿಷರು ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದ ಮೂಲಕ, ಹಂಪೆಯ ವಾಸ್ತುಕಲಾಕೃತಿಗಳ ಆವರಣವನ್ನು ಶುಚಿಗೊಳಿಸಿ, ರಕ್ಷಣೆ ಮಾಡಿದರೋ, ಅದೇ ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಈ ಸುಂದರ ಗಾರೆಗಚ್ಚಿನ ಗೋಪುರ ನಾಶಗೊಂಡಿದೆ!

ಪಾಪ, ಕಲ್ಲಿನ ರಥ ನಿರ್ಮಾಣ ಮಾಡಿದ ಶಿಲ್ಪಿಯು (ಆ ಕಲಾವಿದನ ಹೆಸರನ್ನು ಸಹ ನಾವು ಪ್ರಚುರ ಪಡಿಸಿಲ್ಲ ..ಛೆ), ಮನಸ್ಸು ಮಾಡಿದ್ದರೆ ಅದರ ಮೇಲೊಂದು ಕಲ್ಲಿನ ಗೋಪುರವನ್ನೇ ನಿರ್ಮಿಸಬಹುದಿತ್ತು. ಅದೇ ಕಾಲಘಟ್ಟದಲ್ಲಿ ನಿರ್ಮಾಣಗೊಂಡ ತಾಡಪತ್ರಿಯ ಕಲ್ಲಿನ ರಥ ಮತ್ತು ಕಲ್ಲಿನ ಗೋಪುರಗಳು ಇಂದಿಗೂ ಸುಸ್ಥಿತಿಯಲ್ಲಿವೆ. ಗೋಪುರಕ್ಕೆ ಆಕರ್ಷಕ ಬಣ್ಣ ಬಳಿದು ಚೆಂದಗೊಳಿಸಲು ಆ ಶಿಲ್ಪಿಯು, ಬಣ್ಣ ಹಚ್ಚಲು ಅನುಕೂಲವಾಗುವಂತೆ ಗಾರೆಗಚ್ಚಿನ ಗೋಪುರ ನಿರ್ಮಿಸಿರಬೇಕು. ಹಂಪೆಯ ಕೃಷ್ಣ ದೇಗುಲ ಸೇರಿದಂತೆ ಹಲವು ಕಟ್ಟಡಗಳಲ್ಲಿ ಇಂದಿಗೂ ಗಾರೆಗಚ್ಚಿನ ಕಲಾಕೃತಿಗಳು ಉಳಿದುಕೊಂಡು ಬಂದಿವೆ. ಆದರೆ, ಲ್ಲಿನ ರಥದ ಮೇಲಿರುವ ಗೋಪುರವನ್ನು, ಅದು ನಿರ್ಮಾಣಗೊಂಡ ಐದು ಶತಮಾನಗಳ ನಂತರ, ಮೊನ್ನೆ ಮೊನ್ನೆ ನಾಶ ಮಾಡಲಾಗಿದೆ! 1565ರಲ್ಲಿ ನಡೆದ ಶತ್ರುಗಳ ದಾಳಿಯ ನಂತರವೂ ಉಳಿದುಕೊಂಡಿದ್ದ ಆ ಗೋಪುರವು 20ನೆಯ ಶತಮಾನದ 'ಆಧುನಿಕ' ಮಾನವನ ಕೈಚಳಕ್ಕೆ ಗುರಿಯಾಗಿದೆ.

ನೀವೂ ಓದಿರಬಹುದು, 2019ರಲ್ಲಿ ಹಂಪೆಯ ಐತಿಹಾಸಿಕ ಕಲ್ಲಿನ ಕಂಬವೊಂದನ್ನು ಇಬ್ಬರು ಉತ್ತರ ಭಾರತೀಯ ಪ್ರವಾಸಿಗರು ಉರುಳಿಸಿದ್ದರು. ಅವರು ಹುಡುಗಾಟಕ್ಕಾಗಿ ಅದನ್ನು ಬೀಳಿಸಿದ್ದರು. ಆ ಕಂಬಕ್ಕಿದ್ದ ಐತಿಹಾಸಿಕ, ಸಾಂಸ್ಕøತಿಕ ಮತ್ತು ತುಸು ಭಾವನಾತ್ಮಕ ಮೌಲ್ಯದ ಅರಿವೇ ಅವರಿಗಿರಲಿಲ್ಲ. ಇದೇ ರೀತಿ, 1940ರ ದಶಕದಲ್ಲೂ ಯಾರೋ ಈ ಗೋಪುರವನ್ನು ರುಳಿಸಿರಬಹುದು. ಇನ್ನೊಂದು ನೋವಿನ ವಿದ್ಯಮಾನ ನಮ್ಮ ನಾಡಿನಲ್ಲಿ ಇಂದಿಗೂ ನಡೆಯುತ್ತಿದೆ. ಅದೆಂದರೆ, ನಿಧಿಯ ಆಸೆಗಾಗಿ ಐತಿಹಾಸಿಕ ಕಟ್ಟಡಗಳ, ದೇಗುಲಗಳ, ಬಸದಿಗಳ ಗರ್ಭಗುಡಿ, ಶಾಸನ, ಗೋಡೆಯನ್ನು ನಾಶಪಡಿಸುವ ದೃಷ್ಕ್ರುತ್ಯಕ್ಕೆ. ಹಂಪೆಯ ಶಿಲಾರಥದ ಗೋಪುರದಲ್ಲಿ ಚಿನ್ನ ಇರಬಹುದೆಂದು, ಯಾರೋ ದುರುಳರು 1920-40ರ ಅವಧಿಯಲ್ಲಿ ನಾಶಪಡಿಸಿರಲೂಬಹುದು.

ಹಂಪೆಯ ಕಲ್ಲಿನ ರಥವನ್ನು ರಕ್ಷಿಸುವ ಸಂದರ್ಭದಲ್ಲಿ, ಸರಕಾರಿ ಇಲಾಖೆಗಳೇ ಆ ಹಾನಿಗೊಂಡ ಗೋಪುರವನ್ನು1910ರ ನಂತರ ಕೆಡವಿ, ಚೊಕ್ಕಟಗೊಳಿಸಿದರು ಎಂಬ ವಿಚಾರವೂ ಅಲ್ಲಲ್ಲಿ ಕೇಳಿಬಂದಿದೆ. ಹಾಗೆ ಮಾಡಿದ್ದರೆ, ಅದು ಅಂದಿನ ಸರಕಾರದ ಅಕ್ಷಮ್ಯ ಅಪರಾಧ. ಏಕೆಂದರೆ, ಬೋಧಗಯಾದಲ್ಲಿರುವ ಬುದ್ಧನ ದೇಗುಲದ ಆ ಬೃಹತ್ ಗೋಪುರವನ್ನು ಸುಂದರವಾಗಿ ಮರುನಿರ್ಮಿಸಿದ ಬ್ರಿಟಿಷ್ ಸರಕಾರಕ್ಕೆ, ಹಂಪೆಯ ಆ ಪುಟ್ಟ ಗೋಪುರವನ್ನು ಮರು ನಿರ್ಮಿಸಲು ಕಷ್ಟವೇನಲ್ಲ! ಯಾಕೆ ಬಿಡಿ ಈ ಗೋಪುರ, ಹೋಗಲಿ ಬಿಡಿ ಎಂಬ ನಿರ್ಲಕ್ಷ್ಯದಿಂದಲೇ ಆ ಗಾರೆಗಚ್ಚಿನ ಸುಂದರ ಗೋಪುರವನ್ನು ಬ್ರಿಟಿಷ್ ಅಧಿಕಾರಿಗಳು ಬೀಳಿಸಿದರೆ? 1892ರಲ್ಲಿ ತೆಗೆದ ಶಿಲಾ ರಥದ ಪೋಟೋಗಳನ್ನು ಕಂಡಾಗ, ಈ ಎಲ್ಲಾ ಪ್ರಶ್ನೆಗಳು ಉದ್ಭವಿಸುತ್ತಿವೆ.

ಬಹು ಪ್ರಸಿದ್ಧ ಎನಿಸಿರುವ ಹಂಪೆಯ ರಥಕ್ಕೆ ಇನ್ನಷ್ಟು ಪ್ರಚಾರ ಕೊಡಲು, ಅದರ ಮೇಲೆ ಒಂದು ಗೋಪುರವಿತ್ತು, 500 ವರ್ಷ ಅದು ಭದ್ರವಾಗಿತ್ತು ಎಂಬ ವಿಚಾರವನ್ನು ನಮ್ಮ ಪಠ್ಯಗಳಲ್ಲಿ ಸೇರಿಸಬೇಕು ಎಂದು, ಈ ಸಂದರ್ಭದಲ್ಲಿ ನಮ್ಮ ಪಠ್ಯಪುಸ್ತಕ ಸಮಿತಿಗೆ ಮನವಿ ಮಾಡಿದರೆ ತಪ್ಪಾಗುತ್ತದೆಯೆ? ಪ್ರವಾಸಿ ಮಾರ್ಗದರ್ಶಿಗಳಲ್ಲೂ ಈ ಗೋಪುರವಿದ್ದ ವಿಚಾರ ಪ್ರಚುರಗೊಳ್ಳಬೇಕು. ಅಂದರೆ ಹಾಗೆ, ಇನ್ನೂ ಒಂದು ಮನವಿಯನ್ನು ನಮ್ಮ ಇಂದಿನ ಪುರಾತತ್ವ ಇಲಾಖೆಗೆ ಮಾಡಿದರೆ ಎಂಬ ಯೋಚನೆ ಹೊಳೆಯುತ್ತಿದೆ. ನಾಲ್ಕಾರು ದಶಕಗಳ ಹಿಂದಿನ ತನಕ ಉಳಿದುಕೊಂಡಿದ್ದ ಆ ಗಾರೆಗಚ್ಚಿನ ಗೋಪುರವನ್ನು ನಮ್ಮವರು ಏಕೆ ಮರುನಿರ್ಮಾಣ ಮಾಡಬಾರದು? ಆಧಾರವಾಗಿ, ಆಕರವಾಗಿ ಬ್ರಿಟಿಷ್ ಛಾಯಾಚಿತ್ರಗ್ರಾಹಕರು ತೆಗೆದ ಪೋಟೋಗಳಿವೆ. ಭಾರತದ ಅತಿ ಪ್ರಸಿದ್ಧ ಸ್ಮಾರಕ ಎನಿಸಿರುವ ಹಂಪೆಯ ಶಿಲಾರಥದ ಮೇಲೆ, ಮೊನ್ನೆ ಮೊನ್ನೆ ತನಕ ಇದ್ದ ಇಟ್ಟಿಗೆ ಗೋಪುರವನ್ನು ಪುರಾತತ್ವ ಇಲಾಖೆಯೇ ಮರುನಿರ್ಮಿಸಿ, ಇತಿಹಾಸದ ಮೇಲಿರುವ ನಿಷ್ಠೆಯನ್ನು ಮೆರೆಯಲಿ ಆ ಮೂಲಕ ನಮ್ಮ ಪರಂಪರೆಗೆ, ಅಸ್ಮಿತೆಗೆ ಗೌರವ ನೀಡಲಿ ಇದೊಂದು ಒಳ್ಳೆಯ ಮನವಿ ಆದೀತಲ್ಲವೆ?

.    .    .

Discus